ಮೈಸೂರು : ಅತ್ಯಾಚಾರ ಪ್ರಕರಣದ ಸಂತ್ರಸ್ತೆ ತನಿಖೆಗೆ ಸಹಕರಿಸುತ್ತಿಲ್ಲ ಎಂಬುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದ್ದಾರೆ.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂತ್ರಸ್ತೆಯ ರಕ್ಷಣೆ ಬೇಕಾಗಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇನೆ. ಅವರು ತನಿಖೆಗೆ ಪೊಲೀಸರೊಂದಿಗೆ ಸಹಕರಿಸಬೇಕು. ಆದರೆ ಸಂತ್ರಸ್ತೆ ತನಿಖೆಗೆ ಸ್ಪಂದಿಸುತ್ತಿಲ್ಲ. ಸಂತ್ರಸ್ತೆ ಪೋಷಕರು ಕೂಡ ಯಾರೊಂದಿಗೂ ಮಾತನಾಡುವುದಿಲ್ಲ ಎಂದಿದ್ದಾರೆ. ಸಂತ್ರಸ್ತೆಯನ್ನ ಇಲ್ಲಿಯವರೆಗೆ ಯಾರು ಭೇಟಿ ಮಾಡಿಲ್ಲ. ಭೇಟಿ ಮಾಡದಂತೆ ಆಕೆಯ ಪೋಷಕರು ಪತ್ರ ನೀಡಿದ್ದಾರೆ. ಆದ್ರೆ ಆರೋಪಿಗಳ ಪತ್ತೆಗೆ ನಾನಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದರು.
ತನಿಖೆ ನಡೆಸುತ್ತಿರುವವರಲ್ಲಿ ಹಿರಿಯ ಅಧಿಕಾರಿಗಳಿದ್ದಾರೆ. ಅವರಿಗೆ ಸಂಪೂರ್ಣ ಮಾಹಿತಿ ಇದೆ. ಇಂದು ಪೊಲೀಸ್ ಇಲಾಖೆಯ ಸಭೆ ನಡೆಸಿದ ನಂತರ ವೈಫಲ್ಯ ಕಂಡುಬಂದರೆ ಅಧಿಕಾರಿಗಳ ತಲೆದಂಡದ ಕುರಿತು ತೀರ್ಮಾನಿಸಲಾಗುವುದು ಎಂದರು.










