ಹಾಸನ : ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಮುಖ್ಯಮಂತ್ರಿ, ಕೇಂದ್ರ ನಾಯಕರು ನಿರ್ಧಾರ ಕೈಗೊಳ್ಳುತ್ತಾರೆ. ಕೇಂದ್ರ ನಾಯಕರು, ಸಿಎಂ ಬೊಮ್ಮಾಯಿ ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಸಚಿವರಾಗುತ್ತಾರೆ ಎಂದು ಮುಖ್ಯಮಂತ್ರಿಗಳಿಗೆ ಗೊತ್ತು, ಅವರು ಕೇಂದ್ರ ನಾಯಕರ ಜೊತೆ ಚರ್ಚೆ ಮಾಡುತ್ತಾರೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಹೌದು, ಆದರೆ ಸಚಿವ ಸ್ಥಾನ ನೀಡುವುದರ ಕುರಿತು ತೀರ್ಮಾನ ಮಾಡುವುದು ಕೇಂದ್ರದ ನಾಯಕರು, ಮುಖ್ಯಮಂತ್ರಿಗಳಾಗಿದ್ದಾರೆ. ಅವರು ಸಚಿವ ಸ್ಥಾನ ಕೊಟ್ಟರೆ ತೆಗೆದುಕೊಳ್ಳುತ್ತೇನೆ ಎಂದರು.
ಷಡ್ಯಂತ್ರ ಮಾಡಿ ನನ್ನ ಮೇಲೆ ಕೇಸ್ ಹಾಕಿಸಿದ್ದಾರೆ ಅಂತ ಇಡಿ ರಾಜ್ಯದ ಬಿಜೆಪಿ ಕಾರ್ಯಕರ್ತರಿಗೆ ಗೊತ್ತು. ಆ ಕೇಸ್ ನಿಂದ ಮುಕ್ತರಾಗಿ ಬರಲಿ ಎಂದು ಎಲ್ಲರ ಅಪೇಕ್ಷಿಯಿತ್ತು, ಕ್ಲೀನ್ ಚಿಟ್ ಸಿಕ್ತು, ಮುಗೀತು. ಈಗ ತೀರ್ಮಾನ ಕೇಂದ್ರ ನಾಯಕರದ್ದು, ಬಹಳ ಚರ್ಚೆ ಮಾಡುವ ವಿಚಾರ ಏನಲ್ಲ ಎಂದರು.
ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಎಂದು ರಾಹುಲ್ ಗಾಂಧಿ ಬಳಿ ಸಿದ್ದರಾಮಯ್ಯ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಮೂರು ಜನ ವೆಂಕ, ನಾಣಿ, ಸೀನ ಇದ್ದಂಗೆ. ಇಂತಹ ಎಷ್ಟು ಯಾತ್ರೆಯನ್ನು ನಾವು ಮಾಡಿದ್ದೀವಿ. ಲಾಲ್ ಕೃಷ್ಣ ಅಡ್ವಾಣಿಯವರು ಅಯೋಧ್ಯೆ ರಥಯಾತ್ರೆ ಮಾಡಿದರು, ಅದು ಯಶಸ್ವಿಯಾಯಿತು. ಆದಾದ ಮೇಲೆ ಪ್ರಧಾನಿ ನರೇಂದ್ರ ಮೋದಿ, ಮುರುಳಿ ಮನೋಹರ್ ಜೋಷಿ ಅವರು ತಿರಂಗ ಯಾತ್ರೆ ಮಾಡಿದರು ಎಂದರು.
ಆ ಸಂದರ್ಭದಲ್ಲಿ ಲಾಲ್ ಚೌಕ್ ನಲ್ಲಿ ಪಾಕಿಸ್ತಾನದ ಧ್ವಜ ಹಾರಾಡುತ್ತಿತ್ತು. ಅದನ್ನು ಕಿತ್ತು ನಮ್ಮ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ಆಗಿನ ಕಾಂಗ್ರೆಸ್ ಸರ್ಕಾರದ ಬಳಿ ಎಷ್ಟೇ ಮನವಿ ಮಾಡಿದರೂ ಅದು ಪ್ರಯೋಜನವಾಗಿರಲಿಲ್ಲ. ಅಷ್ಟೇ ಅಲ್ಲದೇ ಲಾಲ್ ಚೌಕ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಿದರೆ 10 ಲಕ್ಷ ರೂ, ಬಹುಮಾನವನ್ನು ಎಂದು ಅಲ್ಲಿನ ಉಗ್ರರು ಬೋರ್ಡ್ ಹಾಕಿದ್ದರು. ಆದರೆ ಆಗ ಕಾಂಗ್ರೆಸ್ ನವರು ಆ ಸವಾಲು ಸ್ವೀಕರಿಸಲಿಲ್ಲ. ಆದರೆ ಭಾರತಮಾತೆ ಬಂಜೆ ಅಲ್ಲ, ಭಾರತಮಾತೆ ಮಕ್ಕಳು ನಾವ್ಯಾರು ಷಂಡರಲ್ಲ, ಮೋದಿಯವರು, ಮುರುಳಿ ಮನೋಹರ ಜೋಷಿಯವರು ತಿರಂಗ ಯಾತ್ರೆ ಮಾಡಿ ಅಲ್ಲಿದ್ದ ಪಾಕಿಸ್ತಾನ ಧ್ವಜ ಕಿತ್ತುಹಾಕಿ, ತ್ರಿವರ್ಣ ಧ್ವಜ ಹಾರಿಸಿದರು. ನಮ್ಮವರು ಯಾತ್ರೆಗಳನ್ನು ಒಂದು ಗುರಿ ಇಟ್ಕಂಡು ಮಾಡುತ್ತಿದ್ದರು ಎಂದು ತಿಳಿಸಿದರು.
ಬಡವರಿಗೆ ಸಹಾಯ ಆಗಲಿ ಅಂತ ಯಡಿಯೂರಪ್ಪ ಅವರು ಎಷ್ಟು ಯಾತ್ರೆ ಮಾಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಜೋಡಿಸುವುದೇ ಕಾಂಗ್ರೆಸ್ ನವರ ಗುರಿ. ತುಂಬಾ ನೊಂದು ಹೇಳುತ್ತೇನೆ ಭಾರತ ತುಂಡು ಮಾಡಿದ್ದು ಯಾರು ? ಹಿಂದೂಸ್ತಾನ, ಪಾಕಿಸ್ತಾನ ಅಂತ ಎರಡು ಭಾಗ ಮಾಡಿದರು. ತುಂಡು ಮಾಡಿ ಅಧಿಕಾರವನ್ನು ನಡೆಸಿದರು. ಇವತ್ತು ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ. ಇಡೀ ದೇಶದಲ್ಲಿ ಬೂದುಗಾಜು ಇಟ್ಕಂಡು ಹುಡುಕಬೇಕು ಕಾಂಗ್ರೆಸ್ ಎಲ್ಲಿದೆ ಅಂತ, ಆ ಸ್ಥಿತಿ ಬಂದಿದೆ. ಅಧಿಕಾರದ ಆಸೆಯಿಂದ ಕಾಂಗ್ರೆಸ್ ಹಾಳು ಮಾಡುತ್ತೀರಿ ವಿಸರ್ಜನೆ ಮಾಡಿ ಅಂತ ಮಹಾತ್ಮ ಗಾಂಧಿಜಿ ಹೇಳಿದ್ದರು. ಈಗ ಇಡೀ ದೇಶದಲ್ಲಿ ಬಿಜೆಪಿ, ರಾಷ್ಟ್ರೀಯ ವಿಚಾರಗಳು, ಧರ್ಮ ರಕ್ಷಣೆ ಮಾಡುವ ವಿಚಾರ ಹೇಳಿ ಕೊಡುತ್ತಿದೆ. ಇದರಿಂದ ಬಿಜೆಪಿ ದೇಶದಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತಿದೆ, ಕೇಂದ್ರ, ರಾಜ್ಯ ನಮ್ಮ ಕೈಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.










