ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ವಾಲ್ಮೀಕಿ ಹಾಗೂ ಎಸ್ಟಿ ಸಮುದಾಯದ ನಾಯಕ ಸತೀಶ್ ಜಾರಕಿಹೊಳಿ ಅವರಿಗೆ ಪರ್ಯಾಯ ನಾಯಕರನ್ನು ಬೆಳೆಸಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶ್ರೀರಾಮುಲು ಅವರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಮುಲು ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ, ಆದರೆ ನನ್ನ ಆರೋಪ ಮಾಡಿ ಹೋಗೋದು ಬೇಡ, ನಾನು 40 ವರ್ಷಗಳಲ್ಲಿ ಅವರಿಗೆ ಮಾಡಿರುವ ಸಹಾಯವನ್ನು ಬೂದಿಯಲ್ಲಿ ಹಾಕಿ, ಎಲ್ಲವನ್ನು ಮರೆತು ಹೋಗುವುದಾದರೇ ಹೋಗಲಿ ಎಂದು ಹೇಳಿದ್ದಾರೆ. ಡಿಕೆಶಿ, ಸತೀಶ್ ಜಾರಕಿಹೊಳಿಯನ್ನು ಸೋಲಿಸಲು ಹೇಗಾದರೂ ಮಾಡಿ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಕರೆದುಕೊಳ್ಳುವ ಸಂಬಂಧ ಮಾತುಕತೆ ನಡೆಸುತ್ತಿದ್ದಾರೆ ಎಂಬುದು ಬಳ್ಳಾರಿ ಜನ ಮಾತನಾಡಿಕೊಳ್ಳತ್ತಿದ್ದಾರೆ. ಪಕ್ಷ ಬಿಡೋದು ಅವರ ವೈಯಕ್ತಿಕ ವಿಚಾರ. ಹೋಗುವುದಾದರೆ ಅವರು ಹೋಗಲಿ. ಪಕ್ಷ ಬಿಟ್ಟು ಹೋಗುವಾಗ ನನ್ನ ಮೇಲೆ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಜನಾರ್ದನ ರೆಡ್ಡಿ ತಿರುಗೇಟು ನೀಡಿದರು. ನಾನು ಭಗವಂತನನ್ನು ನಂಬಿದ್ದೇನೆ, ಕರ್ಮ ಯಾರನ್ನು ಬಿಡುವುದಿಲ್ಲ ಎಂದಿದ್ದಾರೆ.










