ಹುಬ್ಬಳ್ಳಿ : ರಾಜ್ಯದ ಪ್ರಸಿದ್ಧ ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಾಡಹಗಲೇ ಹುಬ್ಬಳ್ಳಿಯ ಉಣಕಲ್ ಕೆರೆ ಬಳಿ ಇರುವ ಖಾಸಗಿ ಹೋಟೆಲ್ ನಲ್ಲಿ ಚಂದ್ರಶೇಖರ್ ಗುರೂಜಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.
ಭಕ್ತರ ವೇಷದಲ್ಲಿ ಬಂದು ಚೂರಿ ಇರಿದಿರುವ ಮಾಹಿತಿ ಲಭ್ಯವಾಗಿದೆ. ಚಾಕು ಇರಿಯುವ ದೃಶ್ಯ ಹೋಟೆಲ್ ನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಚಂದ್ರಶೇಖರ್ ಗುರೂಜಿ ಅವರ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಚಂದ್ರಶೇಖರ್ ಗುರೂಜಿ ಅವರು ಮೂಲತಃ ಬಾಗಲಕೋಟೆ ಅವರಾಗಿದ್ದು, ಬಿಇ ಸಿವಿಲ್ ಪದವಿಯನ್ನು ಬಾಗಲಕೋಟೆ ಬಸವೇಶ್ವರ ಇಂಜನಿಯರಿಂಗ್ ಪಡೆದುಕೊಂಡಿದ್ದರು. ಬಾಗಲಕೋಟೆಯಿಂದ 1988 ರಲ್ಲಿ ಮುಂಬೈಗೆ ತೆರಳಿ ಕಾಂಟ್ರಾಕ್ಟರ್ ಕೆಲಸ ಮಾಡುತ್ತಿದ್ದರು. ಮುಂಬೈನಿಂದ ಐದಾರು ವರ್ಷಗಳ ಬಳಿಕ ಸಿಂಗಾಪುರಕ್ಕೆ ಹೋಗಿದ್ದರು. ಸಿಂಗಾಪುರದಲ್ಲಿ ವಾಸ್ತು ಶಾಸ್ತ್ರ ಕಲಿತು ಮುಂಬೈಗೆ ಬಂದು ಸರಳ ವಾಸ್ತು ಆರಂಭ ಮಾಡಿದ್ದರು.










