ಚಿಕ್ಕಮಗಳೂರು : ಸರ್ಕಾರದಿಂದ ದೊರೆಯುವ ಸೌಲಭ್ಯ ಮತ್ತು ಸವಲತ್ತುಗಳನ್ನು ಕಾರ್ಮಿಕ ಸಮುದಾಯ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಜಯರಾಂ ಸಜಿತ್ ಸಲಹೆ ನೀಡಿದರು.
ತಾಲ್ಲೂಕಿನ ಆವತಿಯಲ್ಲಿ ಕಾರ್ಮಿಕ ಇಲಾಖೆಯ ಶ್ರಮ ಸಂಜೀವಿನಿ ಕಾರ್ಯಕ್ರಮದಡಿ ಇಂದು ನಡೆದ ಕಾರ್ಮಿಕರ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಲವು ವರ್ಷಗಳ ಹಿಂದೆ ಕಾರ್ಮಿಕರ ಕಷ್ಟ ಸುಖ ನೋವು ಮತ್ತು ಸಮಸ್ಯೆಗಳನ್ನು ಕೇಳುವವರೇ ಇರಲಿಲ್ಲ, ಆ ಕಾಲದಲ್ಲಿ ಕಾರ್ಮಿಕರಿಗೆ ಯಾವುದೇ ಮೂಲಭೂತ ಸೌಲಭ್ಯಗಳೂ ದೊರೆಯುತ್ತಿರಲಿಲ್ಲ ಎಂದರು.
ಇತ್ತೀಚಿನ ವರ್ಷಗಳಲ್ಲಿ ಸರ್ಕಾರಗಳು ಕಾರ್ಮಿಕರಿಗೆ ನೆರವಿನ ಹಸ್ತ ಚಾಚಿವೆ, ಆ ಸಮುದಾಯಕ್ಕೆ ಅನೇಕ ಸೌಲಭ್ಯ ಮತ್ತು ಸವಲತ್ತುಗಳನ್ನು ನೀಡುತ್ತಿವೆ ಎಂದ ಅವರು ಕಾರ್ಮಿಕರು ಅವುಗಳ ಲಾಭ ಪಡೆದುಕೊಂಡು ಆರ್ಥಿಕವಾಗಿ ಸಧೃಡರಾಗಬೇಕು ಎಂದು ಕಿವಿಮಾತು ಹೇಳಿದರು.
ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಶಿಬಿರದಲ್ಲಿ ಡಾ|| ಅನಿತ್ ಕುಮಾರ್ ನೇತೃತ್ವದ ವೈದ್ಯರ ತಂಡ ಆವತಿ, ನರಿಗುಡ್ಡೆ, ಸಿರಗೂರು, ಹಾರ್ಜಿಹಳ್ಳಿ, ಕೆರೆಮಕ್ಕಿ, ದಾನಿಹಳ್ಳಿ, ಮಸಗಲಿ, ನಿಡಗೋಡು, ಗಾಂಧಿನಗರ ಗ್ರಾಮಗಳ 70ಕ್ಕೂ ಹೆಚ್ಚು ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿತು.
ಒಕ್ಕೂಟದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಪಿ.ಮಂಜಪ್ಪ, ಗ್ರಾ.ಪಂ. ಅಧ್ಯಕ್ಷ ಹೆಚ್.ಆರ್.ಈರೇಶ್, ಸದಸ್ಯರಾದ ಪವಿತ್ರ, ಜಯಾನಂದ, ಅಭಿವೃದ್ದಿ ಅಧಿಕಾರಿ ಸುಶ್ಮಿತಾ, ಕಾರ್ಯದರ್ಶಿ ಬಿ.ಯೋಗೇಶ್, ಹೆಚ್.ಕೆ.ಬಸವರಾಜ್, ವಿದ್ಯಾ, ಮಲ್ಲೇಶ್ ಹಾಜರಿದ್ದರು.










