ಸಾವಿಗೂ ಮುನ್ನ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಹೋಗಿದ್ದ ಪರೇಶ್ ಮೇಸ್ತಾ ; ಸಿಬಿಐ ವರದಿಯಲ್ಲಿ ಬಹಿರಂಗ…

79
firstsuddi

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರೇಶ್ ಮೇಸ್ತಾ ಸಾಯುವ ಮುನ್ನ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಹೋಗಿದ್ದ ಎಂಬುದು ಸಿಬಿಐ ವರದಿಯಿಂದ ಬಹಿರಂಗವಾಗಿದೆ.

2017ರ ಡಿಸೆಂಬರ್ 6 ರಂದು ಕುಮಟಾದಲ್ಲಿ ಕಾಂಗ್ರೆಸ್ ನ ಬೃಹತ್ ಕಾರ್ಯಕ್ರಮ ನಡೆದಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮವಲ್ಲಿ ಮೇಸ್ತಾ ಸಹ ಭಾಗವಹಿಸಿದ್ದರು. ಇದಕ್ಕಾಗಿ 25 ಕಿ.ಮೀ ಪ್ರಯಾಣಿಸಿದ್ದರು. ಕಾರ್ಯಕ್ರಮ ಮುಗಿಸಿ ಸಂಜೆ ಮನೆಗೆ ಬಂದಿದ್ದ ಪರೇಶ್ ಮೇಸ್ತಾ ನಂತರ ಸ್ನೇಹಿತರ ಭೇಟಿಗೆಂದು ಹೊರಗೆ ಹೋಗಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪರೇಶ್ ಯಾವುದೇ ಹುಡುಗಿಯನ್ನು ಪ್ರೀತಿಸುತ್ತಿರಲಿಲ್ಲ. ಸ್ನೇಹಿತರೊಂದಿಗೆ ಹೆಚ್ಚು ಒಡನಾಟ ಹೊಂದಿದ್ದ ಪರೇಶ್, ಆಗಾಗ ಮನೆಗೆ ಬರುತ್ತಿರಲಿಲ್ಲ. ಮೀನು ವ್ಯಾಪಾರ ನಡೆಸುತ್ತಿದ್ದ, ಅಯ್ಯಪ್ಪ ಮಾಲೆ ಧರಿಸಲು ತಂದೆ ಅನುಮತಿ ಪಡೆದಿದ್ದ ಎಂದು ವರದಿಯಲ್ಲಿದೆ. ಸ್ನೇಹಿತರು, ಒಡನಾಡಿಗಳ ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಿರುವ ಸಿಬಿಐ, ಪರೇಶ್ ಕುರಿತಾದ ಹಲವು ವಿಷಯಗಳನ್ನು ಉಲೇಖಿಸಿದೆ.

ಹೊನ್ನಾವರದಲ್ಲಿ 2017ರ ಡಿಸೆಂಬರ್ 6ರಂದು ನಡೆದ ಕೋಮುಗಲಭೆಯಲ್ಲಿ ನಾಪತ್ತೆಯಾಗಿದ್ದ ಮೇಸ್ತಾ ಎರಡು ದಿನಗಳ ಬಳಿಕ ಶೆಟ್ಟಿಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಬಿಜೆಪಿ, ಹಿಂದೂಪರ ಸಂಘಟನೆಗಳು ಇದು ಕೊಲೆ ಎಂದು ಆಗ್ರಹಿಸಿ ಪ್ರತಿಭಟಿಸಿದ್ದವು.

ಬಿಜೆಪಿ ನಾಯಕರ ಆಗ್ರಹದಂತೆ ಪ್ರಕರಣವನ್ನ ಸಿದ್ದರಾಮಯ್ಯ ಸರ್ಕಾರ ಸಿಬಿಐಗೆ ವಹಿಸಿತ್ತು. ಸುದೀರ್ಘ ನಾಲ್ಕೂವರೆ ವರ್ಷಗಳ ತನಿಖೆ ಬಳಿಕ ಅಂತಿಮ ವರದಿ ಸಲ್ಲಿಸಿರುವ ಸಿಬಿಐ, ಪರೇಶ ಮೇಸ್ತಾನದ್ದು ಕೊಲೆಯಲ್ಲ, ಸಹಜ ಸಾವೆಂದು ಬಿ ರಿಪೋರ್ಟ್ ಸಲ್ಲಿಸಿತ್ತು. ಆದರೆ ಪರೇಶ್ ಮೇಸ್ತಾ ಅವರ ತಂದೆ ಆ ವರದಿಗೆ ಆಕ್ಷೇಪ ಎತ್ತಿದ್ದರು. ಮಗನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು.