ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಕಾರ್ಯಕರ್ತ.

56
firstsuddi

ಕೊಡಗು : ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಕಾರ್ಯಕರ್ತನೇ ಅನ್ನೋದು ಬಹಿರಂಗವಾಗಿದೆ. ಕುಶಾಲನಗರ ನ್ಯಾಯಾಲಯದ ಆವರಣದಲ್ಲಿ ಪೊಲೀಸರು ಆರೋಪಿ ಸೋಮವಾರ ಪೇಟೆ ನಿವಾಸಿಯಾಗಿರುವ ಸಂಪತ್ ಎಂಬಾತನನ್ನು ಬಂಧಿಸಿದ್ದಾರೆ.

ಆರೋಪಿ ಸಂಪತ್ ನ್ಯಾಯಾಲಯಕ್ಕೆ ಶರಣಾಗಲು ಬಂದ ಸಂದರ್ಭದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪೊಲೀಸರ ಬಂಧನಕ್ಕೂ ಮುನ್ನ ಸಿದ್ದರಾಮಯ್ಯರ ಕಾರಿಗೆ ಮೊಟ್ಟೆ ಎಸೆದಿದ್ದು ನಾನೇ ಎಂದು ಸಂಪತ್ ಒಪ್ಪಿಕೊಂಡಿದ್ದಾರೆ. ನಾನು ಕಾಂಗ್ರೆಸ್ ಕಾರ್ಯಕರ್ತ. ಈ ಹಿಂದೆ ಜೆಡಿಎಸ್ ಕಾರ್ಯಕರ್ತನಾಗಿದ್ದೆ. ಮಾಜಿ ಸಚಿವ ಜೀವಿಜಯ ಅವರ ಅಭಿಮಾನಿ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಕಾಂಗ್ರೆಸ್‍ಗೆ ಸೇರ್ಪಡೆಗೊಂಡಿದ್ದೇನೆ. ಈ ಹಿಂದೆ ಸಿದ್ದರಾಮಯ್ಯ ಕೊಡಗಿನವರು ದನದ ಮಾಂಸ ತಿನ್ನುತ್ತಾರೆ ಎಂದು ಹೇಳಿಕೆ ನೀಡಿದ್ದರು. ಟಿಪ್ಪು ಸುಲ್ತಾನನ ವಿಚಾರಕ್ಕೆ ಕೊಡಗು ಜನತೆಯ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ. ಸಿದ್ದರಾಮಯ್ಯರ ಹೇಳಿಕೆಗಳಿಂದ ನೊಂದಿದ್ದ ನಾನು ಅವರು ಕೊಡಗಿಗೆ ಬರುತ್ತಿದ್ದಂತೆಯೇ ಕಾರಿಗೆ ಮೊಟ್ಟೆ ಹೊಡೆದಿದ್ದೇನೆ ಎಂದು ಆರೋಪಿ ಸಂಪತ್ ಹೇಳಿದ್ದಾನೆ .

ಇತ್ತ ಆರೋಪಿ ಸಂಪತ್ ಅಪ್ಪಚ್ಚು ರಂಜನ್ ಜೊತೆಯಲ್ಲಿ ಇರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಬಿಜೆಪಿ ಹೇಳುವ ಸುಳ್ಳುಗಳಿಗೆ ‘ಸತ್ಯ’ವೇ ಕಂಗೆಟ್ಟು ದೇಶ ಬಿಟ್ಟು ಓಡಿ ಹೋಗಲಿದೆ! ಈ ವ್ಯಕ್ತಿಯೊಂದಿಗೆ ಅಪ್ಪಚ್ಚು ರಂಜನ್ ಅವರಿಗೆ ಏನು ಕೆಲಸ? ಕಾರಿಗೆ ಮೊಟ್ಟೆ ಎಸೆದವರು ಕಾಂಗ್ರೆಸ್ ನವರು ಎಂಬ ಕಟ್ಟುಕತೆ ಸೃಷ್ಟಿಸುವ ಮುನ್ನ ಉತ್ತರಿಸಿ, ಎಂದು ಪ್ರಶ್ನಿಸಿದೆ.

ಸ್ಥಳೀಯ ಕಾಂಗ್ರೆಸ್ ಮುಖಂಡರಿಗೇ ಪರಿಚಯವಿಲ್ಲದ ಆತ ಕಾಂಗ್ರೆಸ್ ಕಾರ್ಯಕರ್ತನಾಗುವುದು ಹೇಗೆ? ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಕಾರ್ಯಕರ್ತ ಎಂಬ ಕಾಗಕ್ಕ ಗುಬ್ಬಕ್ಕನ ಕತೆ ಕಟ್ಟಿರುವ ರಾಜ್ಯ ಬಿಜೆಪಿ ಘಟಕ ಉತ್ತರಿಸಬೇಕು. ಅವರು ಕಾಂಗ್ರೆಸ್ ಕಾರ್ಯಕರ್ತರೇ ಆಗಿದ್ದರೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಠಾಣೆಯಿಂದ ಜಾಮೀನು ಕೊಟ್ಟು ಕರೆತಂದಿದ್ದೇಕೆ? ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ ಆತ ಅಪ್ಪಚ್ಚು ರಂಜನ್ ಗೇಕೆ ಆಪ್ತನಾಗಿದ್ದಾನೆ ?, ಎಂದು ಟ್ವೀಟ್ ಮಾಡಿದೆ.