ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಘೋರ ದುರಂತ ; ಸ್ಫೋಟದ ತೀವ್ರತೆಗೆ ಇಬ್ಬರ ದೇಹಗಳು ಛಿದ್ರ ಛಿದ್ರ…

83
firstsuddi

ಬೆಂಗಳೂರು : ನಗರದಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದೆ. ಚಾಮರಾಜಪೇಟೆಯ ರಾಯನ್ ಸರ್ಕಲ್ ನಲ್ಲಿ ಸಿಲಿಂಡರ್ ಸ್ಫೋಟವಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

ನ್ಯೂ ತರಗುಪೇಟೆ ಬಳಿಯ ಶ್ರೀ ಮಹಾಕಾಳಿ ಅಮ್ಮನ್ ಲಾರಿ ಸರ್ವಿಸ್ ಗೋದಾಮಿನಲ್ಲಿ ಈ ದುರ್ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ಗೋದಾಮಿನಲ್ಲಿದ್ದ ಇಬ್ಬರು ಹಾಗೂ ಪಂಕ್ಚರ್ ಶಾಪ್ನಲ್ಲಿದ್ದ ಓರ್ವ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಮೃತರ ದೇಹ ಛಿದ್ರ ಛಿದ್ರಗೊಂಡಿದ್ದು, ನಾಲ್ವರಿಗೆ ಗಾಯಗಳಾಗಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರನ್ನು ಮನೋಹರ್, ಅಸ್ಲಾಂ ಪಾಷಾ  ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಬೈಕ್ಗಳು ಸುಟ್ಟು ಕರಕಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಕ್ಕಪಕ್ಕದ ಮನೆಗಳಲ್ಲಿದ್ದವರಿಗೂ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮನೆಗಳ ಕಿಟಕಿ ಗಾಜು ಪುಡಿಪುಡಿಯಾಗಿವೆ. ಸ್ಫೋಟದಿಂದ ಚಿಲ್ಲರೆ ಅಂಗಡಿ ಸಂಪೂರ್ಣ ಜಖಂ ಆಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿ ಭೇಟಿ ನೀಡಿ, ಪರಿಶೀಲಿಸಿದ ಬಳಿಕ ಮಾತನಾಡಿದ ಡಿಸಿಪಿ ಹರೀಶ್ ಪಾಂಡೆ, ಇಂದು ಮಧ್ಯಾಹ್ನ ಸ್ಫೋಟ ಸಂಭವಿಸಿದೆ. ಸಿಲಿಂಡರ್ ಅಥವಾ ಪಟಾಕಿ ಗೋದಾಮಿನಿಂದ ಸ್ಫೋಟ ಸಂಭವಿಸಿದೆಯೋ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಎಫ್ಎಸ್ಎಲ್ ತಜ್ಞರು ಬರುತ್ತಿದ್ದಾರೆ ಎಂದರು.