ನವದೆಹಲಿ : ಪೆಗಾಸಸ್ ಗೂಢಚರ್ಯೆ ಪ್ರಕರಣವನ್ನು ತನಿಖೆಗೆ ಆಗ್ರಹಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಮುಂದಿನವಾರ ಆದೇಶ ಹೊರಡಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
ಇಂದು ವಿಚಾರಣೆ ವೇಳೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಪೀಠ, ಇನ್ನೊಂದು ವಾರದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿ ರಚನೆ ಮಾಡುವುದಾಗಿ ಹೇಳಿದೆ. ಈ ವಾರವೇ ಆದೇಶ ನೀಡುವ ಉದ್ದೇಶವನ್ನು ಕೋರ್ಟ್ ಹೊಂದಿತ್ತು. ಆದರೆ ಕೆಲವು ತಜ್ಞರ ವೈಯಕ್ತಿಕ ಕಾರಣಗಳಿಂದಾಗಿ ಮುಂದಿನ ವಾರ ತೀರ್ಪು ಪ್ರಕಟಿಸಲು ಕೋರ್ಟ್ ತಿರ್ಮಾನಿಸಿದೆ. ಮುಖ್ಯ ನಾಯಮೂರ್ತಿ ಎನ್.ವಿ ರಮಣ ಅವರಿದ್ದ ಪೀಠ ಈ ನಿರ್ಧಾರಕ್ಕೆ ಬಂದಿದ್ದು, ಮುಂದಿನ ವಾರ ಮಧ್ಯಂತರ ಆದೇಶ ಹೊರಡಿಸಲಾಗುವುದು ಎಂದಿದ್ದಾರೆ.
ಪೆಗಾಸಸ್ ಗೂಢಚರ್ಯೆ ಆರೋಪದ ಹಿನ್ನೆಲೆ ಸ್ವತಂತ್ರ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸೆಪ್ಟೆಂಬರ್ 13 ರಂದು ಸುದೀರ್ಘ ವಿಚಾರಣೆ ನಡೆಸಿ, ಪೆಗಾಸಸ್ ಪ್ರಕರಣದಲ್ಲಿ ಮಧ್ಯಂತರ ಆದೇಶವನ್ನು ಕಾಯ್ದಿರಿಸಿದ್ದ ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠವು , ರಾಷ್ಟ್ರೀಯ ಭದ್ರತೆ ಅಥವಾ ರಕ್ಷಣೆಗೆ ಸಂಬಂಧಿಸಿದ ಯಾವುದೇ ವಿವರಗಳು ತನಗೆ ಬೇಕಾಗಿಲ್ಲ. ಆದರೆ ನಾಗರಿಕರ ಗೌಪ್ಯತೆಗೆ ಸಂಬಂಧಿಸಿದ ಆರೋಪಗಳಿಗೆ ಸ್ಪಷ್ಟೀಕರಣವನ್ನು ಮಾತ್ರ ಬಯಸುತ್ತಿದೆ ಎಂದು ಹೇಳಿತ್ತು.










