ಕೇರಳ: ಕನ್ನಡ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ 16 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ ಸುಪ್ರಸಿದ್ಧ ಹಿರಿಯ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್ ನಿನ್ನೆ ಸಂಜೆ ಇಲ್ಲಿನ ಖಾಸಗಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಭಾವ ಗಾಯಕ ರೆಂದೇ ಖ್ಯಾತಿ ಪಡೆದಿದ್ದ ಇವರು ಪ್ರೀತಿ, ಭಕ್ತಿಯ ಭಾವನೆಗಳನ್ನು ತುಂಬಿ ಅತ್ಯಂತ ಸೊಗಸಾಗಿ ಹಾಡುತ್ತಿದ್ದರು. ನಿನ್ನೆ ತಮ್ಮ ನಿವಾಸದಲ್ಲಿ ಜಯಚಂದ್ರನ್ ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು ಎಂದು ಕುಟುಂಬವರಿಂದ ತಿಳಿದು ಬಂದಿದೆ. ಸಂಜೆ ಸುಮಾರು 7.55ಕ್ಕೆ ವಿಧಿವಶರಾದರು ಎಂದು ಆಸ್ಪತ್ರೆಯಲ್ಲಿ ವರದಿ ತಿಳಿಸಲಾಗಿದೆ. ಮೃತರು ಪತ್ನಿ ಲಲಿತಾ, ಮಗ ಗಾಯಕ ದೀನನಾಥನ್ ಮತ್ತು ಮಗಳು ಲಕ್ಷ್ಮೀ ಅವರನ್ನು ಅಗಲಿದ್ದಾರೆ. ಜಯಚಂದ್ರನ್ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ 16 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದರು. ಈ ಮೂಲಕ ಭಾರತೀಯ ಸಂಗೀತ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಅತ್ಯುತ್ತಮ ಹಿನ್ನೆಲೆ ಗಾಯಕನನ್ನು ಸಾಕಷ್ಟು ಪ್ರಶಸ್ತಿ, ಗೌರವಗಳು ಇವರಿಗೆ ಅರಸಿಕೊಂಡು ಬಂದಿವೆ. ರಾಷ್ಟ್ರೀಯ ಫಿಲ್ಮ್ ಪ್ರಶಸ್ತಿಗಳು ಹಾಗು ಕೇರಳ ಸರ್ಕಾರ ಪ್ರತಿಷ್ಟಿತ ಜೆ.ಸಿ ಜೇನಿಯಲ್ ಪ್ರಶಸ್ತಿ ನೀಡಿ ಗೌರವಿಸಿದೆ. ಎರಡು ಬಾರಿ ತಮಿಳುನಾಡು ರಾಜ್ಯ ಸಿನಿಮಾ ಪ್ರಶಸ್ತಿ ದೊರೆತಿದೆ. ಐದು ಬಾರಿ ಕೇರಳ ರಾಜ್ಯ ಸಿನಿಮಾ ಪ್ರಶಸ್ತಿ ಪಡೆದಿದ್ದಾರೆ. ಶ್ರೀ ನಾರಾಯಣ ಗುರು ಸಿನಿಮಾದಲ್ಲಿನ ಶಿವ ಶಂಕರ ಶರಣ ಸರ್ವ ವಿಭೋ ಪ್ರದರ್ಶನಕ್ಕಾಗಿ ಇವರಿಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿತ್ತು.










