ನವದೆಹಲಿ : ಸುಲಭವಾಗಿ ಉದ್ಯಮ ವಹಿವಾಟು ನಡೆಸಲು ಸಾಧ್ಯವಾಗುವ ವಿಷಯದಲ್ಲಿ ಜಾಗತಿಕ ಸೂಚ್ಯಂಕ ಪಟ್ಟಿಯನ್ನು ವಿಶ್ವ ಬ್ಯಾಂಕ್ ಇಂದು ಬಿಡುಗಡೆ ಮಾಡಿದ್ದು, ಸೂಚ್ಯಂಕ ಪಟ್ಟಿಯಲ್ಲಿ ಭಾರತ 14 ಸ್ಥಾನಗಳಿಗೆ ಏರಿಕೆಯಾಗಿ 63ನೇ ಸ್ಥಾನ ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆ ಮತ್ತು ಬಂಡವಾಳ ಹೂಡಿಕೆ ಮಾಡಲು ವಿವಿಧ ಕಂಪನಿಗಳು ತೋರಿಸಿದ್ದ ಆಸಕ್ತಿಯಿಂದಾಗಿ ಈ ಶ್ರೇಯಂಕ ಪಟ್ಟಿಯಲ್ಲಿ ಭಾರತದ ಸ್ಥಾನ ಜಿಗಿದಿದೆ. 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ವೇಳೆ ಭಾರತ 142ನೇ ಸ್ಥಾನದಲ್ಲಿತ್ತು. 4 ವರ್ಷದ ಬಳಿಕ 2018ನೇ ಸೂಚ್ಯಂಕ ಪಟ್ಟಿಯಲ್ಲಿ 77ನೇ ಸ್ಥಾನ ಲಭಿಸಿತ್ತು. ಈಗಾ 2019ನೇ ಸೂಚ್ಯಂಕ ಪಟ್ಟಿಯಲ್ಲಿ ಭಾರತಕ್ಕೆ 63ನೇ ಸ್ಥಾನ ಲಭಿಸಿದ್ದು, ನ್ಯೂಜಿಲೆಂಡ್, ಸಿಂಗಾಪೂರ್, ಹಾಂಕಾಂಗ್, ಡೆನ್ಮಾರ್ಕ್, ದಕ್ಷಿಣ ಕೊರಿಯ, ಅಮೆರಿಕ, ಜಾರ್ಜಿಯಾ, ಇಂಗ್ಲೆಂಡ್, ನಾರ್ವೆ, ಸ್ವಿಡನ್ ಕ್ರಮವಾಗಿ ಪಟ್ಟಿಯಲ್ಲಿ ಮೊದಲ 10 ಸ್ಥಾನಗಳನ್ನು ಪಡೆದಿದೆ.










