ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ-ಪ್ರೇಯಸಿ ರಿಯಾ ಚಕ್ರವರ್ತಿ ಬಂಧನ…

144
firstsuddi

ಮುಂಬೈ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ ಅಧಿಕಾರಿಗಳು ಸುಶಾಂತ್ ಸಿಂಗ್ ಪ್ರೇಯಸಿ ನಟಿ ರಿಯಾ ಚಕ್ರವರ್ತಿ ಅವರನ್ನು ಬಂಧಿಸಿದ್ದಾರೆ. ಸುಶಾಂತ್ ಆತ್ಮಹತ್ಯೆ ಪ್ರಕರಣ ಡ್ರಗ್ಸ್ ತಿರುವು ಪಡೆದುಕೊಂಡಿದ್ದು, ಇದರಲ್ಲಿ ಪ್ರೇಯಸಿ ರಿಯಾ ಚಕ್ರವರ್ತಿ ಹೆಸರು ಕೇಳಿ ಬಂದಿತ್ತು. ಈ ವೇಳೆ ಎನ್‍ಸಿಬಿ ಅಧಿಕಾರಿಗಳು ರಿಯಾ ಚಕ್ರವರ್ತಿ ಅವರ ವಾಟ್ಸಾಪ್ ಸ್ಕ್ರೀನ್‍ಶಾಟ್ ಆಧಾರವಾಗಿಸಿ ರಿಯಾ ಚಕ್ರವರ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೇ ಕಳೆದ ಎರಡು ದಿನಗಳ ಹಿಂದೆ ಎನ್‍ಸಿಬಿ ಅಧಿಕಾರಿಗಳು ನಟಿ ರಿಯಾ ಚಕ್ರವರ್ತಿ ಅವರ ಸೋದರ ಶೌವಿಕ್ ಚಕ್ರವರ್ತಿ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದರು. ವಿಚಾರಣೆ ವೇಳೆ ಅಕ್ಕ ರಿಯಾಗಾಗಿ ಡ್ರಗ್ಸ್ ಖರೀದಿ ಮಾಡುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದರು. ಶೌವಿಕ್ ಚಕ್ರವರ್ತಿಯ ಕೆಲವು ಹೇಳಿಕೆಯನ್ನು ಆಧರಿಸಿ ಎನ್‍ಸಿಬಿ ಅಧಿಕಾರಿಗಳು ಮತ್ತಷ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಶೌವಿಕ್ ಚಕ್ರವರ್ತಿಯ ಬಂಧನದ ಬಳಿಕ ಎನ್‍ಸಿಬಿ ಅಧಿಕಾರಿಗಳು ಭಾನುವಾರ ಮತ್ತು ಸೋಮವಾರ ರಿಯಾ ಚಕ್ರವರ್ತಿ ಅವರನ್ನು ವಿಚಾರಣೆ ನಡೆಸಿದ್ದರು. ಇಂದು ಮೂರನೇ ದಿನದ ವಿಚಾರಣೆ ಮುಗಿಸಿದ ಅಧಿಕಾರಿಗಳು ರಿಯಾ ಚಕ್ರವರ್ತಿ ಅವರನ್ನು ಬಂಧಿಸಿದ್ದಾರೆ.