ನವದೆಹಲಿ : ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನವನ್ನು ನಡೆಸಲಾಗುತ್ತಿದೆ. ಈ ಅಭಿಯಾನಕ್ಕೆ ಭಾರತೀಯ ಅಂಚೆ ಸೇವೆಯು ಕೈಜೋಡಿಸಿದ್ದು, 10 ದಿನಗಳಲ್ಲಿ 1 ಕೋಟಿಗೂ ಹೆಚ್ಚು ರಾಷ್ಟ್ರೀಯ ಧ್ವಜವನ್ನು ಮಾರಾಟ ಮಾಡಿದೆ.
ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಮುನ್ನ, ಭಾರತೀಯ ಅಂಚೆ ಸೇವೆಯು ರಾಷ್ಟ್ರಧ್ವಜವನ್ನು ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಲು ಮುಂದಾಗಿತ್ತು. ಈಗಾಗಲೇ ದೇಶಾದ್ಯಂತ 1 ಕೋಟಿಗೂ ಹೆಚ್ಚು ರಾಷ್ಟ್ರಧ್ವಜವನ್ನು ಮನೆಮನೆಗಳಿಗೆ 4.2 ಲಕ್ಷ ಅಂಚೆ ನೌಕರರು ತಲುಪಿಸುವ ಕಾರ್ಯ ಮಾಡಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.
ದೇಶಾದ್ಯಂತ 4.2 ಲಕ್ಷ ಅಂಚೆ ನೌಕರರು ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ, ಗಡಿ ಪ್ರದೇಶಗಳಲ್ಲಿ, ಎಲ್ ಡಬ್ಲ್ಯೂಇ ಜಿಲ್ಲೆಗಳಲ್ಲಿ ಮತ್ತು ಪರ್ವತ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ “ಹರ್ ಘರ್ ತಿರಂಗ” ಸಂದೇಶವನ್ನು ತಿಳಿಸುತ್ತಿದ್ದಾರೆ.
ಆನ್ ಲೈನ್ ಮಾರಾಟಕ್ಕಾಗಿ ಇಲಾಖೆಯು ದೇಶಾದ್ಯಂತ ಯಾವುದೇ ವಿಳಾಸಕ್ಕೆ ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸುತ್ತದೆ. ಇಪೋಸ್ಟ್ ಆಫೀಸ್ ಸೌಲಭ್ಯದ ಮೂಲಕ ನಾಗರಿಕರು 1.75 ಲಕ್ಷಕ್ಕೂ ಹೆಚ್ಚು ಧ್ವಜಗಳನ್ನು ಆನ್ ಲೈನ್ ನಲ್ಲಿ ಖರೀದಿಸಿದ್ದಾರೆ. ಅಂಚೆ ಇಲಾಖೆಯು ತ್ರಿವರ್ಣ ಧ್ವಜವನ್ನು 25 ರೂ. ಗೆ ಮಾರಾಟ ಮಾಡುತ್ತಿದೆ ಎಂದು ಸಚಿವಾಲಯ ಹೇಳಿದೆ.










