ಹುಬ್ಬಳ್ಳಿ : ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಯಾವುದೇ ಕಾರಣಕ್ಕೂ ಗೆಲ್ಲಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿ ಮಠಕ್ಕೆ ತೆರಳಿ ಸ್ವಾಮೀಜಿ ದರ್ಶನ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಸದೃಢ ಕಾರ್ಯಕರ್ತರಿದ್ದಾರೆ. ಅವರ ನಿರ್ಧಾರವೇ ಅಂತಿಮವಾಗಿದೆ. ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಗೆಲ್ಲಲ್ಲ. ನಾನು ನನ್ನದೆಯಾದ ರೀತಿಯಲ್ಲಿ ಸರ್ವೇ ಮಾಡಿಸಿ ವರದಿ ತರಿಸಿಕೊಂಡಿದ್ದೇನೆ. ಅದನ್ನು ಗಮನದಲ್ಲಿಟ್ಟುಕೊಂಡು ಹೇಳುತ್ತಿದ್ದೇನೆ ಎಂದರು.
ಹೆಚ್.ಡಿ.ರೇವಣ್ಣ ಕುಟುಂಬಕ್ಕೆ ಯಾರೋ ತಲೆ ತುಂಬುತ್ತಿದ್ದಾರೆ. ಶಕುನಿಗಳು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಮುಗಿಸಬೇಕು ಅಂತಿವೆ. ಹಾಸನ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ. ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸಬೇಕೆಂಬುದೇ ನನ್ನ ಗುರಿ. ಹೆಚ್.ಡಿ.ರೇವಣ್ಣ 2 ಕ್ಷೇತ್ರಗಳ ಟಿಕೆಟ್ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಲ್ಲಾ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರತಿಕ್ರಿಯೆ ನಡೆಯುತ್ತಿದೆ. ನಾನು ನಿರಂತರವಾಗಿ ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಕೆಲವು ಸಣ್ಣ- ಪುಟ್ಟ ಸಮಸ್ಯೆಗಳಿಂದ ಎರಡನೇ ಪಟ್ಟಿ ಬಿಡುಗಡೆ ಮಾಡಿಲ್ಲ. ಗೊಂದಲ ಬಗ್ಗೆ ಹಲವಾರು ಚರ್ಚೆ, ನಾಲ್ಕು ಗೋಡೆಗಳ ಮಧ್ಯೆ ನಡೆದಿದ್ದು, ಮಾಧ್ಯಮಗಳಿಗೆ ತಮಗೆ ಏನು ಬೇಕೋ ಹಾಗೇ ಮಾತನಾಡುತ್ತಿದ್ದಾರೆ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.










