ಹಾಸನ : ನಗರದಲ್ಲಿ ಮತ್ತೆ ರೌಡಿ ಪಡೆ ಗುಟುರು ಹಾಕಿದ್ದು, ಶಾಂತಿಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ 75 ಕೂಗಳತೆ ದೂರದಲ್ಲಿ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬರ್ಬರವಾಗಿ ಕೊಲೆಯಾಗಿದ್ದಾನೆ.
ಹಾಸನದ ವಲ್ಲಭಾಯ್ ರಸ್ತೆಯ ಲೋಕೇಶ್ ಅಲಿಯಾಸ್ ಕೆಂಚಲೋಕಿ ಕೊಲೆ ಆದ ವ್ಯಕ್ತಿ ಎನ್ನಲಾಗಿದ್ದು, ನಾಲ್ಕೈದು ಮಂದಿ ಸ್ನೇಹಿತರ ಜೊತೆ, ಆಟೋವೊಂದರಲ್ಲಿ ಹಾಸನದಿಂದ ಶಾಂತಿಗ್ರಾಮಕ್ಕೆ ಕೆಲವೇ ಗಂಟೆಗಳ ಹಿಂದೆ ತೆರಳಿದ್ದ. ಎಲ್ಲರೂ ಶಾಂತಿಗ್ರಾಮ ಟೋಲ್ ಸಮೀಪದ ಜಮೀನು ಬಳಿ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದ್ದು, ಎಣ್ಣೆ ನೆತ್ತಿಗೇರುತ್ತಿದ್ದಂತೆಯೇ ಮಾತಿಗೆ ಮಾತು ಶುರುವಾಗಿದೆ. ಬಹುಶಃ ಪಕ್ಕಾ ಪ್ಲಾನ್ ಮಾಡಿಕೊಂಡೇ ಇಲ್ಲಿಗೆ ಬಂದಿದ್ದವರು ಹಳೆಯ ವೈಷಮ್ಯ ಅಥವಾ ಬೇರಾವುದೋ ಜಿದ್ದಿನಿಂದ ಜಗಳಕ್ಕೆ ಇಳಿದಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಜೊತೆಯಲ್ಲೇ ಕರೆತಂದು ಕೊಚ್ಚಿ ಕೊಂದ ನಂತರ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಜಗಳವಾಗುವುದನ್ನು ಕೇಳಿದ ನೆರೆ ಹೊರೆಯ ಜನರು ಹತ್ತಿರದಲ್ಲೇ ಇದ್ದ ಶಾಂತಿಗ್ರಾಮ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಪೊಲೀಸರು ಬರುವ ವೇಳೆಗೆ ಬಂದ ಆಟೋದಲ್ಲೇ ಕೊಲೆ ಮಾಡಿ ಎಸ್ಕೇಪ್ ಆಗುತ್ತಿದ್ದವರನ್ನು ಪೊಲೀಸರು ಬೆನ್ನಟ್ಟಿ ಅಡ್ಡಗಟ್ಟಿದಾಗ ಪೊಲೀಸರಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಲು ಯತ್ನಿಸಿದ್ದಾರೆ.
ಅದೇ ವೇಳೆಗೆ ಆಟೋ ಕೈ ಕೊಟ್ಟಾಗ ಆಟೋ ಅಲ್ಲೇ ಬಿಟ್ಟು ಕೊಲೆ ಗಡುಕರು ಪರಾರಿಯಾಗಿದ್ದಾರೆ. ಜಮೀನು ಬಳಿಯ ಹಳ್ಳದಲ್ಲಿ ಕೆಂಚ ಲೋಕಿಯ ಹೆಣ ಬಿದ್ದಿತ್ತು. ಸುದ್ದಿ ತಿಳಿದ ಕೂಡಲೇ ಎಸ್ಪಿ ಡಾ.ರಾಮ್ ನಿವಾಸ್ ಸೆಪಟ್, ಡಿವೈಎಸ್ಪಿ ಪುಟ್ಟಸ್ವಾಮಿಗೌಡ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೋಕಿ ಹಿಂದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನ ಮೇಲೆ ಮೂರು ಮರ್ಡರ್ ಕೇಸ್ ಹಾಗೂ 307 ಕೇಸ್ ದಾಖಲಾಗಿದೆ. ಸರಗಳ್ಳತನ ಸೇರಿ ಹದಿಮೂರಕ್ಕೂ ಹೆಚ್ಚು ಪ್ರಕರಣಗಳು ಈತನ ಮೇಲೆ ದಾಖಲಾಗಿದ್ದು, ಇದೇ ಆರೋಪದ ಅಡಿ ಜೈಲು ಸೇರಿದ್ದ ಕೆಂಚಲೋಕಿ ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಹೊರ ಬಂದಿದ್ದ. ಅದಾದ ಕೆಲವೇ ದಿನಗಳಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾನೆ.










