ಹಾಸನಾಂಬ ದರ್ಶನಕ್ಕೆ ಗಲಾಟೆ: ವಿಐಪಿ, ವಿವಿಐಪಿ, ಪಾಸ್ ರದ್ದು, ಧರ್ಮ ದರ್ಶನಕ್ಕಷ್ಟೇ ಅವಕಾಶ.

30

ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇಗುಲಕ್ಕೆ 8ನೇ ದಿನವಾದ ನಿನ್ನೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು 7-8 ಗಂಟೆಯಾದರೂ ದೇವಿಯ ದರ್ಶನ ಸಾಧ್ಯವಾಗದೆ ಜಿಲ್ಲಾಡಳಿತ ಹಾಗೂ ವಿಶೇಷ ಪಾಸುಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಕ್ತರ ಆಕ್ರೋಶಕ್ಕೆ ಮಣಿದ ಹಾಸನ ಜಿಲ್ಲೆಯ ಜಿಲ್ಲಾಡಳಿತ ಇದೀಗ ವಿವಿಐಪಿ ಪಾಸ್ ಸೇರಿ ಎಲ್ಲಾ ರೀತಿಯ ಪಾಸುಗಳನ್ನು ರದ್ದುಪಡಿಸಿ, ಧರ್ಮ ದರ್ಶನಕ್ಕಷ್ಟೇ ಅವಕಾಶ ನೀಡಿದೆ. ಈ ವರ್ಷ ಹಾಸನಾಂಬೆಯ ದರ್ಶನಕ್ಕಾಗಿ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಸುಗಮ ದರ್ಶನ ಕಲ್ಪಿಸಲು ಜಿಲ್ಲಾಡಳಿತ ಮಂಡಳಿ ಪರದಾಟ ಅನುಭವಿಸಿತು. ಧರ್ಮದರ್ಶನದ ಸಾಲು ಮೂರು ಕಿ.ಮೀ ಗೂ ಹೆಚ್ಚು ಉದ್ದ ಬೆಳೆದಿದ್ದು, ಇನ್ನು ವಿಐಪಿ, ವಿವಿಐಪಿ, 1000 ರುಪಾಯಿಯ ವಿಶೇಷ ಪಾಸ್. ಮತ್ತಿತರ ಪಾಸ್ ಹೊಂದಿರುವವರ ಸಾಲಿನಲ್ಲೂ ಕ್ಯೂ ಇತ್ತು. ಈ ಬಾರಿ 20 ಲಕ್ಷ ಮಂದಿ ದೇವಿ ದರ್ಶನ ಪಡೆಯಬಹುದೆಂದು ಜಿಲ್ಲಾಡಳಿತ ಅಂದಾಜಿಸಿದ್ದರೂ ಆದರೆ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಜನರನ್ನು ನಿಯಂತ್ರಿಸುವುದೇ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸತ್ತು. ಜೊತೆಗೆ ವಿಐಪಿ ಪಾಸ್ ಗಳ ಕುರಿತಂತೆಯೂ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು.