ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ಗೇಟ್‍ನಲ್ಲೇ ತಡೆದ ಪ್ರಾಂಶುಪಾಲರು.

100
firstsuddi

ಉಡುಪಿ : ಹಿಜಬ್ ಧರಿಸಿ ಕಾಲೇಜಿಗೆ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕುಂದಾಪುರದ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲರು ಹಿಜಬ್ ತೆಗೆದು ತರಗತಿಗೆ ಬರುವಂತೆ ತಿಳಿಸಿದರು. ಆದರೆ ವಿದ್ಯಾರ್ಥಿನಿಯರು ಹಿಜಬ್ ತೆಗೆಯಲು ನಿರಾಕರಿಸಿದರು. ಈ ವೇಳೆ ವಿದ್ಯಾರ್ಥಿಯರನ್ನು ಪ್ರಾಂಶುಪಾಲರು ಗೇಟ್ ಬಳಿ ತಡೆದಿದ್ದಾರೆ.

ಈ ಸಂದರ್ಭದಲ್ಲಿ ಪ್ರಾಂಶುಪಾಲರ ಜೊತೆ ವಿದ್ಯಾರ್ಥಿನಿಯರ ವಾಗ್ವಾದ ನಡೆಯಿತು. ನಾವು ಮೊದಲಿನಿಂದಲೂ ಹಿಜಬ್ ಧರಿಸಿ ತರಗತಿಗೆ ಹಾಜರಾಗುತ್ತಿದ್ದೇವೆ. ಬೇಕಾದರೆ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಲ್ಯ ಧರಿಸಿ ಬರಲಿ. ಸರ್ಕಾರದ ಆದೇಶದಲ್ಲಿ ಕುಂದಾಪುರ ಸರ್ಕಾರಿ ಕಾಲೇಜಿನ ಉಲ್ಲೇಖವಿದ್ದರೆ ಮಾತ್ರ ನಾವು ಹಿಜಬ್ ತೆಗೆಯುತ್ತೇವೆ ಎಂದು ವಿದ್ಯಾರ್ಥಿನಿಯರು ವಾದ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿದ ಪ್ರಾಂಶುಪಾಲರು ಸರ್ಕಾರ ಇಡೀ ರಾಜ್ಯಕ್ಕೆ ಸುತ್ತೋಲೆ ಹೊರಡಿಸಿದೆ. ಪ್ರತಿಯೊಂದು ಕಾಲೇಜಿಗೂ ನೋಟಿಸ್ ನೀಡಲು ಆಗುವುದಿಲ್ಲ. ಸರ್ಕಾರ ಏನು ಹೇಳುತ್ತದೋ ಅದನ್ನು ನಾವು ಅನುಸರಿಸುತ್ತೇವೆ ಎಂದು ತಿಳಿಸಿದರು.

ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಉಡುಪಿ ಉಸ್ತುವಾರಿ ಸಚಿವ ಎಸ್. ಅಂಗಾರ, ಒಂದೊಂದು ಕಾಲೇಜಿಗೆ ಒಂದೊಂದು ನಿಯಮ ಅಸಾಧ್ಯವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಜೊತೆ ಚರ್ಚಿಸಿ ಸರ್ಕಾರ ಒಂದು ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ. ಈ ರೀತಿಯ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ ಎಂದು ಹೇಳಿದರು.