ಬೆಂಗಳೂರು : ಹಿಜಾಬ್ ವಿವಾದ ಸಂಬಂಧ ಇಂದು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನಾಳೆಗೆ ಮುಂದೂಡಿದೆ.
ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ತಿ, ಕೃಷ್ಣ ಎಸ್ ದೀಕ್ಷಿತ್, ಖಾಜಿ ಜೈಬುನ್ನಿಸಾ ಮೊಹಿಯುದ್ದೀನ್ ಪ್ರಕರಣ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ಶಾಲಾ – ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ವಸ್ತ್ರ ಧರಿಸದಂತೆ ಪುನರುಚ್ಚರಿಸಿದ ನ್ಯಾಯ ಪೀಠ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.
ಸಮವಸ್ತ್ರ, ಹಿಜಾಬ್ ಧರಿಸುವ ಬಗ್ಗೆ ಸರ್ಕಾರದ ಆದೇಶಗಳು, ಶಾಸಕರ ಆದೇಶಗಳು, ಕಾಲೇಜು ಅಭಿವೃದ್ದಿ ಸಮಿತಿಗೆ ಹಿಜಾಬ್ ನಿರ್ಬಂಧಿಸುವ ಅಧಿಕಾರವಿಲ್ಲ. ಸರ್ಕಾರ ತನ್ನ ಜವಾಬ್ದಾರಿಯನ್ನು ಇತರರಿಗೆ ಹಸ್ತಾಂತರ ಮಾಡುವಂತಿಲ್ಲ. ಕಾಲೇಜಿಗೆ ದಾಖಲಾದಾಗಿನಿಂದಲೂ ಹಿಜಾಬ್ ಧರಿಸುತ್ತಿದ್ದರು. ಸಮವಸ್ತ್ರದ ಬಣ್ಣದ ಹಿಜಾಬ್ ಧರಿಸುತ್ತಿದ್ದರು. ಹಿಜಾಬ್ ಧರಿಸಬೇಕು, ಉದ್ದದ ನಿಲುವಂಗಿ ಧರಿಸಬೇಕೆಂದು ಧರ್ಮಗ್ರಂಥದಲ್ಲಿದೆ. ಹಿಜಾಬ್ ಪರಿಶೀಲನೆ ನಡೆಸಲು ನಮಗೆ ಆಕ್ಷೇಪ ಇಲ್ಲ. ಕೇಂದ್ರೀಯ ವಿದ್ಯಾಲಯಗಳಲ್ಲಿ ಈಗಲೂ ಹಿಜಾಬ್ಗೆ ಅವಕಾಶವಿದೆ. ಉಡುಪಿನ ಬಣ್ಣ ಹೋಲುವ ಹಿಜಾಬ್ ಧರಿಸಲು ಅವಕಾಶವಿದೆ ಎಂದು ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಅವರು ವಾದ ಮಂಡಿಸಿದ್ದಾರೆ.










