ಹಿರಿಯ ನಟಿ ಜಮುನಾ ನಿಧನ…

56
firstsuddi

ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಮುನಾ(87) ಅವರು ಇಂದು ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹೈದರಾಬಾದ್ ನಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಜಮುನಾ ಪಾರ್ಥಿವ ಶರೀರವನ್ನು ಬೆಳಗ್ಗೆ 11ಗಂಟೆಗೆ ಹೈದರಾಬಾದ್ ನಲ್ಲಿರುವ ಫಿಲಂ ಚೇಂಬರ್ ಗೆ ತರಲಾಗುತ್ತದೆ. ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 

ಜಮುನಾ ಅವರು 1936 ಆಗಸ್ಟ್ 30 ರಂದು ಹಂಪಿಯಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲಿ ನಾಟಕಗಳಲ್ಲಿ ಬಣ್ಣ ಹಚ್ಚಿದ್ದರು. ಇವರ ನಾಟಕಗಳನ್ನು ನೋಡಿ ಸಿನಿಮಾ ಆಫರ್ ಗಳು ಬಂದವು. 1953ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಹಲವು ದಶಕಗಳ ಕಾಲ ಚಿತ್ರರಂಗಕ್ಕಾಗಿ ಶ್ರಮಿಸಿದರು. ಜಮುನಾ ಅವರು 1965ರಲ್ಲಿ ಪ್ರೊಫೆಸರ್ ಜುಲುರಿ ರಮಣ ರಾವ್ ಅವರನ್ನು ಮದುವೆ ಆಗಿದ್ದರು. 2014ರಲ್ಲಿ ಅವರು ಮೃತಪಟ್ಟಿದ್ದಾರೆ.

ಕನ್ನಡದ ಉದಯ್ ಕುಮಾರ್ ಹಾಗೂ ವರನಟ ಡಾ.ರಾಜ್ ಕುಮಾರ್ ಅವರಂತಹ ಹಿರಿಯ ನಟರೊಂದಿಗೆ ಅಭಿನಯಿಸಿದ್ದಾರೆ. ಜಮುನಾ ನಟಿಸಿದ್ದ ಸಾಕ್ಷಾತ್ಕಾರ ಮತ್ತು ರತ್ನಗಿರಿ ರಹಸ್ಯ ಚಿತ್ರ ಸ್ಯಾಂಡಲ್ ವುಡ್‍ನ ಬ್ಲಾಕ್‍ಬ್ಲಸ್ಟರ್ ಚಿತ್ರಗಳಾಗಿದ್ದವು. ಜಮುನಾ ಅವರ ನಟನೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಜಮುನಾ ಅವರ ಅಗಲಿಕೆಗೆ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.