ಹೆಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರ ಕಳೆದುಕೊಂಡು ಮಾನಸಿಕ ಅಸ್ವಸ್ಥರಾಗಿದ್ದಾರೆ : ಎಂ.ಪಿ ರೇಣುಕಾಚಾರ್ಯ.

189
firstsuddi

ಬೆಂಗಳೂರು : ರಮೇಶ್ ಕುಮಾರ್ ಒಬ್ಬ ಕ್ರಿಮಿನಲ್ ಸ್ಪೀಕರ್. ಇಂತಹ ವಿಕೃತ ಮನಸ್ಸಿನ ಸ್ಪೀಕರ್‍ರನ್ನು ರಾಜ್ಯ ಎಂದೂ ನೋಡಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಕುಮಾರ್ ಒಬ್ಬ ಕ್ರಿಮಿನಲ್ ಸ್ಪೀಕರ್ ಇದ್ದ ಹಾಗೆ. ಅವರು 17ಮಂದಿ ಶಾಸಕರನ್ನು ಅನರ್ಹಗೊಳಿಸಿ ಅವರ ಭವಿಷ್ಯವನ್ನು ಹಾಳು ಮಾಡಿದರು. ನಾವು ಆಪರೇಷನ್ ಕಮಲವನ್ನು ಎಂದೂ ಮಾಡಿಲ್ಲ. ಅವರ ಪಕ್ಷದ ಒಳ ಜಗಳ, ಕಚ್ಚಾಟಗಳು ಅವರ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ಉಪಚುನಾವಣೆ ಕುರಿತು ಮಾತನಾಡಿದ್ದು, ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಸೂರ್ಯ ಚಂದ್ರ ಇರುವುದು ಎಷ್ಟು ನಿಜವೋ ಬಿಜೆಪಿ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಅಷ್ಟೇ ಸತ್ಯ. ಸಿದ್ದರಾಮಯ್ಯ ಅವರು ಸಿಎಂ ಆಗಿ ಕಾಂಗ್ರೆಸ್ ಹೀನಾಯ ಸ್ಥಿತಿ ತಲುಪಿದೆ. ಕಾಂಗ್ರೆಸ್ ನಾಯಕರೇ ಸಿದ್ದರಾಮಯ್ಯ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸಿದ್ದರಾಮಯ್ಯ ಅವರು ಕಾಡಿ ಬೇಡಿ ವಿರೋಧ ಪಕ್ಷದ ನಾಯಕರಾಗಿದ್ದಾರೆ ಎಂದರು.
ಈ ವೇಳೆ ಅನರ್ಹ ಶಾಸಕರನ್ನು ಸೋಲಿಸುವುದೇ ನನ್ನ ಗುರಿ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ಹೆಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರ ಕಳೆದುಕೊಂಡು ಮಾನಸಿಕ ಅಸ್ವಸ್ಥರಾಗಿದ್ದಾರೆ. ಕುಮಾರಸ್ವಾಮಿ ಅವರು 2008ರಲ್ಲಿ ಅಧಿಕಾರವನ್ನು ಹಸ್ತಾಂತರ ಮಾಡದೆ ವಚನ ಭ್ರಷ್ಟರಾಗಿದ್ದರು. ಅದರ ಪ್ರಾಯಶ್ಚಿತಕ್ಕಾಗಿ ಅವರು ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿಕೊಂಡಿದ್ದಾರೆ. ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವುದು, ಸೋಲಿಸುವುದು ಕ್ಷೇತ್ರದ ಮತದಾರರು. ನಿಮಗೆ ಸೋಲಿಸುವ ಶಕ್ತಿಯೂ ಇಲ್ಲ. ಚುನಾವಣೆ ಆದ ಬಳಿಕ ಜೆಡಿಎಸ್ ಪಕ್ಷ ಅಡ್ರಸ್ಸೆ ಇರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.