ವರದಿ : ರಾಮಚಂದ್ರ ಮರಿಯಮ್ಮನಹಳ್ಳಿ
ಹೊಸಪೇಟೆ : ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು (ಎಸ್.ಎಂ.ಎಸ್.) ಈ ಮೂರು ಸೂತ್ರಗಳನ್ನು ಅನುಸರಿಸುವುದರಿಂದ ಕೊರೋನಾ ಹರಡದಂತೆ ತಡೆಯಬಹುದು ಎಂದು ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣ ಠಾಣೆಯ ಪಿ.ಎಸ್.ಐ. ಎಂ.ಶಿವಕುಮಾರ್ ಹೇಳಿದರು.
ಅವರು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆವತಿಯಿಂದ ಜನರಿಗೆ ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳ ಕುರಿತು ಪಟ್ಟಣದಾದ್ಯಂತ ಸಿಬ್ಬಂದಿಗಳೊಡನೆ ಸಂಚರಿಸಿ ಬ್ಯಾನರ್ ಹಾಗೂ ಸಂದೇಶ ಫಲಕಗಳ ಪ್ರದರ್ಶನಗಳ ಮೂಲಕ ಜಾಗೃತಿ ಕಾರ್ಯಕ್ರಮವನ್ನು ನಡೆಸಿದರು.
ನಾಗರಿಕರನ್ನು ಉದ್ದೇಶಿಸಿ ಮಾತನಾಡಿ, ಜನಸಂದಣಿ ಪ್ರದೇಶಗಳಲ್ಲಿ ಜನರು ಮೈಮರೆತು ಮಾಸ್ಕ್ ಧರಿಸದೇ ಹೋದರೆ ಕೊರೋನಾ ಹರಡುವ ಸಾಧ್ಯತೆ ಇದೆ. ಹಾಗಾಗಿ ಸಂತೆಗೆ ಬರುವ ವ್ಯಾಪಾರಿಗಳು, ಗ್ರಾಹಕರು, ಆಟೋ ಚಾಲಕರು, ಪ್ರಯಾಣಿಕರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ಲಾಕ್‍ಡೌನ್ ನಿಯಮಗಳನ್ನು ಈಗಾಗಲೇ ಸಡಿಲಗೊಳಿಸಲಾಗಿದೆ. ಆದರೆ ಕೊರೋನಾ ಸಡಿಲಗೊಂಡಿಲ್ಲ. ನಿತ್ಯವೂ ಸಾವಿರಾರು ಜನರು ಸೋಂಕಿಗೆ ಒಳಗಾಗುತ್ತಲೇ ಇದ್ದಾರೆ ಎಂದರು.
ಕೊರೋನ ಸೋಂಕು ತಗುಲಿ ನಂತರ ಪರಿತಪಿಸುವುದಕ್ಕಿಂತ ಮುಂಜಾಗ್ರತೆ ವಹಿಸುವುದೇ ಸೂಕ್ತ, ಮನೆಯಲ್ಲಿರಲಿ ಹೊರಗಡೆಯೇ ಇರಲಿ ಆಗಾಗ ಸ್ಯಾನಿಟೈಸರ್ ಅಥವಾ ಸೋಪಿನಿಂದ ಕೈತೊಳೆಯಿರಿ. ಬಿಸಿನೀರು ಸೇವನೆ, ಸಾಂಪ್ರದಾಯಿಕ ಕಷಾಯ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಿರಿ. ಅಂಗಡಿ ಮುಂಗಟ್ಟುಗಳಲ್ಲಿ ವರ್ತಕರೂ ಸಹ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎ.ಎಸ್.ಐ.ಗಳಾದ ದುರುಗಪ್ಪ, ಹನುಮಂತಪ್ಪ, ಚಾಲಕ ಪೇದೆ ಸಂಜೀವ್ ಕುಮಾರ್ ಸೇರಿದಂತೆ ಇತರರು ಇದ್ದರು.










