ಹೊಸಪೇಟೆ : ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ವಾಹನದ ಮೇಲೆ ಅಧಿಕಾರಿಗಳಿಂದ ದಾಳಿ…

249
firstsuddi

ವರದಿ: ರಾಮಚಂದ್ರ ಮರಿಯಮ್ಮನಹಳ್ಳಿ

ಹೊಸಪೇಟೆ : ಖಚಿತ ಮಾಹಿತಿ ಮೇರೆಗೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ವಾಹನದ ಮೇಲೆ ದಾಳಿ ಮಾಡಿದ ಹೊಸಪೇಟೆ ಆಹಾರ ಇಲಾಖೆಯ ಶಿರಸ್ತೇದಾರ ನಾಗರಾಜ್ ಹೆಚ್ ಮತ್ತು ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‍ಐ ಬಸವರಾಜ್‍ರು ವಾಹನವನ್ನು ಜಪ್ತಿ ಮಾಡಿದ್ದಾರೆ.
ಹೊಸಪೇಟೆಯ ಡಿವೈಎಸ್‍ಪಿಯವರ ಖಚಿತ ಮಾಹಿತಿ ಆಧಾರದ ಮೇಲೆ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸಿರಿಸಿನಕಲ್ಲು ಪ್ರದೇಶದ ಕಾಲುವೆ ಮೇಲೆ ಹೋಗುವ ರಸ್ತೆಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಾಹನದಲ್ಲಿ 36 ಚೀಲಗಳ ಒಟ್ಟು 8.28 ಕ್ವಿಂಟಾಲ್ ತೂಕದ ಪಡಿತರ ಅಕ್ಕಿ ದೊರೆತಿದ್ದು, ಇದರ ಒಟ್ಟು ಮೌಲ್ಯ 12,420 ರೂ.ಗಳಾಗಿರುತ್ತದೆ ಎನ್ನಲಾಗಿದೆ.
ಅಶೋಕ ಲೈಲ್ಯಾಂಡ್ ಕಂಪನಿಯ ಗೂಡ್ಸ್ ವಾಹನ ಸಂಖ್ಯೆ ಕೆಎ 35 ಬಿ7854 ಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದವನ ಮೇಲೆ ದಾಳಿ ಮಾಡಲಾಗಿ ಒಟ್ಟು 8.28 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕೃತ್ಯದಲ್ಲಿ ಭಾಗಿಯಾಗಿರುವ ಹೊಸಪೇಟೆಯ ಯೂಸುಫ್ ತಂದೆ ಖಾಸಿಂ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಕಾನೂನು ಕ್ರಮ ಜರುಗಿಸುವಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸುವಂತೆ ಆಹಾರ ಶಿರೆಸ್ತೇದಾರ ನಾಗರಾಜ್ ಹೆಚ್ ತಿಳಿಸಿದ್ದಾರೆ. ಆರೋಪಿಯನ್ನ ಪೊಲೀಸ್ ಠಾಣೆಗೆ ಒಪ್ಪಿಸಲಾಯಿತು.