ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ, ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡಗೆ ಜಾಮೀನು ಮಂಜೂರಾಗಿದೆ.
ಪಿಡಿಜೆ ಕೋರ್ಟ್ ನಿಂದ ಇಬ್ಬರು ಶ್ಯೂರಿಟಿ ಹಾಗೂ ಒಂದು ಲಕ್ಷ ರೂಪಾಯಿ ಬಾಂಡ್ ನೀಡಲು ಸೂಚಿಸಿ, ಷರತ್ತು ಬದ್ಧ ಜಾಮೀನು ನೀಡಿದೆ. ಸೋನು ಶ್ರೀನಿವಾಸ್ ಗೌಡ ಪರವಾಗಿ ವಕೀಲ ಪ್ರಕಾಶ್ ಜಾಮೀನು ಅರ್ಜಿ ಸಲ್ಲಿಸಿದ್ದರು.
ಜಾಮೀನು ಕೋರಿ ಸೋನು ಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಸೋನು ಗೌಡ ಅವರು ಇಂದು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ಅಕ್ರಮವಾಗಿ ಮಗುವನ್ನು ಮನೆಯಲ್ಲಿಟ್ಟುಕೊಂಡಿರುವ ಆರೋಪದ ಮೇಲೆ ಬಂಧನವಾಗಿದ್ದ ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ ಪೊಲೀಸ್ ಠಾಣೆಯಲ್ಲಿ ಗೋಳಾಡಿದ್ದರು. ಮಗುವನ್ನು ಕರೆದುಕೊಂಡು ಬಂದಿರುವ ವಿಷಯದಲ್ಲಿ ನನ್ನಿಂದ ಯಾವುದೇ ತಪ್ಪು ಆಗಿಲ್ಲವೆಂದು ಹೇಳಿಕೊಂಡಿದ್ದರು.
8 ವರ್ಷದ ಹೆಣ್ಣು ಮಗುವನ್ನು ಅನಧಿಕೃತವಾಗಿ ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ ಸೋನು ಗೌಡ ಅವರನ್ನು ಮಾರ್ಚ್ 22 ರಂದು ಬೆಳಗಿನ ಜಾವ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದರು. ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ಸೋನು ಗೌಡರನ್ನು ವಶಕ್ಕೆ ಪಡೆದಿದ್ದರು. ಬಳಿಕ ಆರೋಪಿ ಸೋನು ಗೌಡ ಅವರನ್ನು ನಾಲ್ಕು ದಿನದ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ನಂತರ ಸೋನು ಶ್ರೀನಿವಾಸ್ ಗೌಡಗೆ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು.