ಪ್ರಯಾಣಿಕರಿಗೆ ಕೆಎಸ್​ಆರ್​ಟಿಸಿಯಿಂದ ಗುಡ್ ನ್ಯೂಸ್: ಯುಗಾದಿ ಹಬ್ಬಕ್ಕೆ 2275 ವಿಶೇಷ ಬಸ್ ವ್ಯವಸ್ಥೆ…

42
firstsuddi

ಬೆಂಗಳೂರು: ಯುಗಾದಿ ಹಬ್ಬಕ್ಕೆ ನಗರದಿಂದ ತಮ್ಮ ತಮ್ಮ ಊರುಗಳಿಗೆ ತೆರಳಲು ಸಿದ್ಧತೆ ನಡೆಸಿರುವ ಜನರಿಗೆ ಕೆಎಸ್​ಆರ್​ಟಿಸಿ ಗುಡ್ ನ್ಯೂಸ್ ಕೊಟ್ಟಿದೆ. ಯುಗಾದಿ, ರಂಜಾನ್ ಹಬ್ಬದ ಸಾಲುಸಾಲು ರಜೆಗಳಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದ್ದು ಬೆಂಗಳೂರಿನಿಂದ ಹೆಚ್ಚುವರಿ ಬಸ್‍ಗಳನ್ನು ರಸ್ತೆಗಿಳಿಸಲು ನಿಗಮ ಮುಂದಾಗಿದೆ.

ಏಪ್ರಿಲ್ 9ರಂದು ಮಂಗಳವಾರ ಯುಗಾದಿ ಹಬ್ಬ ಇರಲಿದೆ. ಶನಿವಾರ, ಭಾನುವಾರ ಹೇಗೂ ರಜೆಯಾದ್ದರಿಂದ ಸೋಮವಾರ ಒಂದು ದಿನ ರಜೆ ಮಾಡಿದರೆ 4 ದಿನ ರಜೆ ಸಿಕ್ಕಂತಾಗುತ್ತದೆ. ಮುಂದಿನ ವಾರ, ಏಪ್ರಿಲ್ 11 ರ ಗುರುವಾರ ಮುಸ್ಲಿಮರ ಹಬ್ಬ ರಂಜಾನ್ ಸಹ ಇರಲಿದೆ. ಮತ್ತೆ ದೀರ್ಘ ವಾರಾಂತ್ಯ ರಜೆ ಸಿಗಲಿದೆ. 13 ರಂದು ಎರಡನೇ ಶನಿವಾರ ರಜೆ ಹಾಗೂ14 ರಂದು ಭಾನುವಾರ ರಜೆ ಇದೆ. ವಿದ್ಯಾರ್ಥಿಗಳಿಗೆ ರಜೆ ಶುರುವಾದ ಕಾರಣ ಮಕ್ಕಳ ಜೊತೆ ಪ್ರವಾಸಕ್ಕೆ ತೆರಳಲು ತಯಾರಿ ನಡೆಸಿರುವ ಪೋಷಕರಿಗೆ ಇದು ಅನುಕೂಲವಾಗಲಿದೆ. ಈ ಎಲ್ಲ ಕಾರಣಗಳನ್ನು ಮತ್ತು ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಕೆಎಸ್​ಆರ್​ಟಿಸಿ ಹೆಚ್ಚುವರಿ ಬಸ್ ನಿಯೋಜನೆ ಮಾಡಿದೆ.

ಕೆಎಸ್​ಆರ್​ಟಿಸಿಯಿಂದ 1,750 ಬಸ್, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 145 ಬಸ್, ಕೆಎಸ್​ಆರ್​ಟಿಸಿಯ 200 ಬಸ್ ಹಾಗೂ ಬಿಎಂಟಿಸಿಯ 180 ವಿಶೇಷ ಬಸ್‍ಗಳು ಸಂಚಾರ ಮಾಡಲಿವೆ. ಒಟ್ಟು ನಾಲ್ಕು ನಿಗಮಗಳಿಂದ 2,275 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.

ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಕೆಂಪೇಗೌಡ ನಿಲ್ದಾಣ, ಸ್ಯಾಟ್‍ಲೈಟ್ ನಿಲ್ದಾಣ, ಶಾಂತಿನಗರದಿಂದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ ಸೇರಿದಂತೆ ಹಲವು ಸ್ಥಳಗಳಿಗೆ ವಿಶೇಷ ಬಸ್ ಸೇವೆ ಮಾಡಲಾಗಿದೆ. ಅಲ್ಲದೇ ನೆರೆರಾಜ್ಯ ಹೈದರಾಬಾದ್, ಚೆನ್ನೈ, ಗೋವಾ ಪಣಜಿ, ಶಿರಡಿ, ಎರ್ನಾಕುಲಂಗೆ ವಿಶೇಷ ಬಸ್ ಸೇವೆ ಇರಲಿದೆ ಎಂದು ಕೆಎಸ್​ಆರ್​ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.