ನವದೆಹಲಿ : ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಹೈಕೋರ್ಟ್‍ನ ಆದೇಶ ಪ್ರಶ್ನಿಸಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸೊರೆನ್ ವಿರುದ್ಧ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ವಿಚಾರಣೆಗೆ ಅರ್ಹ ಎಂದು ಹೈಕೋರ್ಟ್ ಹೇಳಿತ್ತು. 2021ರಲ್ಲಿ ಅಧಿಕಾರದಲ್ಲಿದ್ದಾಗ ಗಣಿ ಗುತ್ತಿಗೆ ನೀಡಿದ ಆರೋಪ ಸೊರೆನ್ ಮೇಲಿದೆ.
ಈ ಪ್ರಕರಣದಲ್ಲಿ ಈ ಹಿಂದೆ ಜಾರಿ ನಿರ್ದೇಶಾಲಯವು ಹೇಮಂತ್ ಸೊರೆನ್ ಅವರ ಆಪ್ತ ಸಹಾಯಕ ಪಂಕಜ್ ಮಿಶ್ರಾ ಹಾಗೂ ಇತರ ಇಬ್ಬರನ್ನು ಬಂಧಿಸಿತ್ತು. ಜುಲೈನಲ್ಲಿ ದಾಳಿ ನಡೆಸಿ ಮಿಶ್ರಾ ಅವರ ಬ್ಯಾಂಕ್ ಖಾತೆಗಳಿಂದ 11.88 ಕೋಟಿ ರೂ. ವಶಪಡಿಸಿಕೊಂಡ ನಂತರ ಇಡಿ ಈ ಕ್ರಮ ಕೈಗೊಂಡಿತ್ತು. ಮಿಶ್ರಾ ಅವರ ಮನೆಯಲ್ಲಿ 5.34 ಕೋಟಿ ರೂ. ಲೆಕ್ಕ ರಹಿತ ನಗದು ಪತ್ತೆಯಾಗಿದೆ ಎಂದು ಇಡಿ ಹೇಳಿದೆ.










