ಬೆಂಗಳೂರು: ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಐವರು ಗಾಯಗೊಂಡಿರುವ ಘಟನೆ ನಗರದ ವೀವರ್ಸ್ ಕಾಲೋನಿ ಸಮೀಪದ ಮಾರುತಿ ಬಡಾವಣೆಯಲ್ಲಿ ನಡೆದಿದೆ.
ಮಾರ್ಟಿನ್ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ವಾಸವಿದ್ದ ಉತ್ತರ ಪ್ರದೇಶದ ಬನಾರಸ್ ಮೂಲದ ಜಮಾಲ್(32) ನಾಜಿಯಾ(22) ಇರ್ಫಾನ್ (21) ಗುಲಾಬ್(18) ಶಹಜಾದ್(9) ಗಾಯಗೊಂಡವರು. ಅಡುಗೆ ಅನಿಲ ಸೋರಿಕೆಯಾಗಿರುವುದು ತಿಳಿಯದೆ ಇಂದು ಮುಂಜಾನೆ 5:30 ರ ಸುಮಾರಿಗೆ ಲೈಟ್ನ ಸ್ವಿಚ್ ಆನ್ ಮಾಡಿದಾಗ ಸಿಲಿಂಡರ್ ಸ್ಫೋಟಗೊಂಡಿದೆ.
ಸ್ಪೋಟದ ತೀವ್ರತೆಗೆ ಮನೆಯ ಕಿಟಕಿ, ಬಾಗಿಲುಗಳು ಛಿದ್ರಗೊಂಡಿವೆ. ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿನ ಗಾಜುಗಳು ಪುಡಿ ಪುಡಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಕೋಣನಕುಂಟೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.










