ಬೆಂಗಳೂರು : ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕ ನಂಬರ್ ಒನ್ ಆಗಿದೆ. ರಾಜ್ಯ ಸರ್ಕಾರ ಹೂಡಿಕೆದಾರರ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ‘ಇನ್ವೆಸ್ಟ್ ಕರ್ನಾಟಕ’ ಸಮಾವೇಶದಲ್ಲಿ ಮಾತನಾಡಿದ ಅವರು, ಕೋವಿಡ್ ನಂತರ ಹೂಡಿಕೆದಾರರ ಸಮಾವೇಶ ಮಾಡಿದ ಮೊದಲ ರಾಜ್ಯ ಕರ್ನಾಟಕ. 7 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ರಾಜ್ಯದಲ್ಲಿ ಆಗುತ್ತಿದೆ. 13 ಸಾವಿರ ಕೋಟಿ ನಾವು ತೆರಿಗೆ ಸಂಗ್ರಹ ಮಾಡಿದ್ದೇವೆ. ಜಿಎಸ್ಟಿ ಸಂಗ್ರಹದಲ್ಲೂ ನಾವು ಎರಡನೇ ಸ್ಥಾನದಲ್ಲಿದ್ದೇವೆ. ನಾವು ಇನ್ನೊಬ್ಬರ ಮೇಲೆ ವಿಶ್ವಾಸ ಇಡೋದಕ್ಕಿಂತ ನಮ್ಮ ಮೇಲೆ ನಾವು ವಿಶ್ವಾಸವಿಡಬೇಕು. ಇದು ನಮ್ಮ ಶಕ್ತಿ, ಇದು ನಮ್ಮ ವಿಷನ್ ಎಂದು ಹೇಳಿದರು.
ರಾಜ್ಯದಲ್ಲಿ ಹೂಡಿಕೆದಾರರಿಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತೇವೆ. ನೀವು ಹೆಚ್ಚು ಉದ್ಯೋಗ ನೀಡಿದರೆ ಹೆಚ್ಚುವರಿ ಹಣ ನೀಡುತ್ತೇವೆ. ಉದ್ಯೋಗಿಗಳು ಖುಷಿಯಾಗಿದ್ದರೆ ಉತ್ಪಾದನೆ ಉತ್ತಮವಾಗಿರುತ್ತದೆ. ಮೂಲಭೂತ ಸೌಲಭ್ಯ ಸೇರಿ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ನಮ್ಮಲ್ಲಿ ಡಿಆರ್ ಡಿಓ, ಹೆಚ್ ಎಎಲ್ ಸೇರಿದಂತೆ ಅನೇಕ ಸಂಸ್ಥೆಗಳಿವೆ. ಮಾನವ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಹೂಡಿಕೆ ಮಾಡುವವರ ನಡುವೆ ಜಾಗತಿಕ ಪೈಪೋಟಿ ಇರಲಿದೆ. ಕರ್ನಾಟಕದಲ್ಲಿ ಗುಣಮಟ್ಟ ಮತ್ತು ಹೆಚ್ಚು ಉತ್ಪಾದನೆಗೆ ಒತ್ತು ನೀಡುತ್ತೇವೆ. 2025ರಲ್ಲಿ ಮತ್ತೆ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ಬೊಮ್ಮಾಯಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರದ ಸಚಿವರಾದ ನಿರ್ಮಲಾ ಸೀತಾರಾಮನ್, ಪಿಯೂಶ್ ಗೋಯೆಲ್, ಪ್ರಹ್ಲಾದ್ ಜೋಶಿ, ರಾಜೀವ್ ಚಂದ್ರಶೇಖರ್, ಸಚಿವರಾದ ಅಶ್ವಥ್ ನಾರಾಯಣ, ಎಂಟಿಬಿ ನಾಗರಾಜ್ ಭಾಗವಹಿಸಿದ್ದರು.










