ಅನೈತಿಕ ಸಂಬಂಧ ಬೆಳೆಸುವಂತೆ ತನ್ನ ಸಹೋದರಿಗೆ ಒತ್ತಾಯಿಸುತ್ತಿದ್ದ ವ್ಯಕ್ತಿಯ ಕಾಲನ್ನು ಮುರಿದಿದ್ದ ಸಹೋದರನ ಕೊಲೆ…

58
firstsuddi

ಕಲಬುರಗಿ: ಅನೈತಿಕ ಸಂಬಂಧ ಬೆಳೆಸುವಂತೆ ತನ್ನ ಸಹೋದರಿಗೆ ಒತ್ತಾಯಿಸುತ್ತಿದ್ದ ವ್ಯಕ್ತಿಯ ಕಾಲನ್ನು ಮುರಿದಿದ್ದ ಸಹೋದರನೇ ಕೊಲೆಯಾಗಿರುವ ಘಟನೆ ನಿನ್ನೆ ರಾತ್ರಿ ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪುರ ಗ್ರಾಮದಲ್ಲಿ ನಡೆದಿದೆ.

ಚಿಣಮಗೇರಾ ಗ್ರಾಮದ ಮಹಾಂತಪ್ಪ ಗಂಡೋಳಿ (26) ಕೊಲೆಯಾದ ಯುವಕ. ಪ್ರಶಾಂತ್ ಅಲಿಯಾಸ್ ಪರಸು ಆಲಮೇಲ್ ಮತ್ತು ದಶರಥ ನೀಲೂರಕರ್ ಎಂಬುವವರ ವಿರುದ್ಧ ಮೃತನ ತಾಯಿ ಶಾಂತಮ್ಮ ಗಂಡೋಳಿ ಪ್ರಕರಣ ದಾಖಲಿಸಿದ್ದಾರೆ.

ಕೊಲೆಯಾಗಿರುವ ಮಹಾಂತಪ್ಪನ ಸಹೋದರಿ ಸುನಿತಾಗೆ ಮದುವೆಯಾಗಿದ್ದು, ಕೆಲವು ವರ್ಷಗಳ ಹಿಂದೆ ಆಕೆಯ ಪತಿ ಮೃತಪಟ್ಟಿದ್ದಾರೆ. ತನ್ನ ಪತಿ ಸಾವಿನ ನಂತರ ಮೂವರು ಮಕ್ಕಳೊಂದಿಗೆ ಸುನಿತಾ ತವರು ಸೇರಿದ್ದರು. ಜೀವನ ಸಾಗಿಸಲು ಕೂಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಈಕೆಯ ಮೇಲೆ ಕಣ್ಣು ಹಾಕಿದ ಆರೋಪಿ ಪ್ರಶಾಂತ್, ತನ್ನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಳ್ಳುವಂತೆ ಸುನಿತಾಗೆ ಪೀಡಿಸಲು ಆರಂಭಿಸಿದ್ದನು.

ಒಂದು ಬಾರಿ ಸುನಿತಾಳ ಮೇಲೆ ಅತ್ಯಾಚಾರಕ್ಕೂ ಪ್ರಶಾಂತ್ ಯತ್ನಸಿದ್ದನಂತೆ. ಎರಡು ವರ್ಷಗಳ ಹಿಂದೆ ಈ ವಿಚಾರವಾಗಿ ಮಹಾಂತಪ್ಪ, ಪ್ರಶಾಂತ್​ನನ್ನು ಹಿಡಿದು ಕಾಲು ಮುರಿದಿದ್ದನು. ಈ ಕಾರಣಕ್ಕೆ ಪ್ರಶಾಂತ್ ಮಹಾಂತಪ್ಪನ ಮೇಲೆ ದ್ವೇಷ ಬೆಳೆಸಿದ್ದನು. ಅದರಂತೆ ನಿನ್ನೆ ಮಹಾಂತಪ್ಪರನ್ನು ಪ್ರಶಾಂತ್ ಮತ್ತು ಸಹಚರ ಅಟ್ಟಾಡಿಸಿ ಕೊಲೆ ಮಾಡಿದ್ದಾರೆ.

ಕೊಲೆ ಪ್ರಕರಣ ಸಂಬಂಧ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.