ಅಪಾಯದತ್ತ ಸರಿಯುತ್ತಿದೆಯೇ ಪ್ರಜಾಪ್ರಭುತ್ವ…? 

651
firstsuddi

– ಡಾ.ಎಂ.ಎಸ್.ಮಣಿ

ಸಮಾನತೆಗಾಗಿ ಯುರೋಪ್‍ನಿಂದ ತಂದ ಧರ್ಮ ಕೂಡ ನಮ್ಮ ದೇಶದಲ್ಲಿ ಏಕರೂಪದ ಧರ್ಮವಾಗಲು ಸಾಧ್ಯವಾಗಿಲ್ಲ. ಇಲ್ಲಿನ ವೈವಿಧ್ಯತೆಯನ್ನು ನಾಶಪಡಿಸಲು ‘ಇಸ್ಲಾಂ’ ನ್ನು ಗುಮ್ಮನಂತೆ ಚಿತ್ರಿಸಲಾಗುತ್ತಿದೆ. ಇದರಲ್ಲಿ ಯಶಸ್ಸು ಲಭಿಸದು. ಕಾರಣ, ನಮ್ಮ ದೇಶ ಮತಾಂತರಿಗಳ ಭೂಮಿ. ಆದರೂ ಇಲ್ಲಿನ ಹಿಂದೂಗಳು ದರ್ಗಾಕ್ಕೆ ಭೇಟಿ ನೀಡುವರು. ಮಕ್ಕಳಿಗೆ ತಾಯತ ಕಟ್ಟಿಸುವರು. ಭಕ್ತಿಯಿಂದ ನಡೆದುಕೊಳ್ಳುವರು. ಇದೇ ರೀತಿ ಮುಸಲ್ಮಾನರೂ ಕೂಡ ಮೈಸೂರು ರಸ್ತೆಯ ಕಾಯಂಗಡಿ ಪಾಪಣ್ಣನವರ ದೇಗುಲದಲ್ಲಿ ಮಕ್ಕಳಿಗೆ ತಾಯತ ಕಟ್ಟಿಸುವರು. ದೀಪಾವಳಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವರು. ಸಂತ ಕಬೀರರು, ಸೂಫಿ ಸಂತರು ದೇವರ ಬಗ್ಗೆ ಹಾಡುವರು. ಇವಿದ್ದರೂ ಹಿಂದೂ-ಮುಸಲ್ಮಾನರ ಮಧ್ಯೆ ತಾತ್ಕಾಲಿಕ ಸಂಘರ್ಷವಿದೆ. 

ಆಹಾರ, ಸಂಸ್ಕೃತಿ, ಕುಲಕಸುಬು, ಸಾಮಾಜಿಕ ನಡವಳಿಕೆಗಳನ್ನು ಆಧರಿಸಿ ಕೆಲವರಿಗೆ ಅಪರಾಧಿಗಳ ಪಟ್ಟ ಕಟ್ಟಲಾಗಿದೆ. ಇವರುಗಳ ಮೇಲೆ ಹಲ್ಲೆ ನಡೆಸಿ ನಾಶಗೊಳಿಸುವ ಹುನ್ನಾರವೂ ನಡೆಯುತ್ತಿದೆ. ಒಂದು ಧರ್ಮದವರನ್ನು ಹೊರತುಪಡಿಸಿ ಉಳಿದ ಧರ್ಮಿಯರನ್ನು ಸಾಂಸ್ಕøತಿಕ, ಸಾಮಾಜಿಕ, ರಾಜಕೀಯ ಅಧಿಕಾರ ಗಳಿಸುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಸೈದ್ಧಾಂತಿಕ ಎಚ್ಚರಿಕೆ ನೀಡಿ ನಾಗರೀಕ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಜಗತ್ತಿನ ಸಾಫ್ಟ್‍ವೇರ್ ಉದ್ಯಮದ ತವರು ಬೆಂಗಳೂರಲ್ಲೇ ಧರ್ಮ, ಜಾತಿ ಆಧರಿಸಿ ಮನೆ ಬಾಡಿಗೆಗೆ ನೀಡುವ ಪರಿಪಾಟವಿದೆ. ಇನ್ನಿವರು ಹಗಲಿರುಳು ದುಡಿದು, ಸ್ವಂತಕ್ಕೊಂದು ಸೂರು ಕೊಳ್ಳಲು ಮುಂದಾದರೆ ಅದಕ್ಕೂ ಅವಕಾಶ ನೀಡಲಾಗುತ್ತಿಲ್ಲ. ಉದಾಹರಣೆಗೆ ಗಾಂಧಿ ಬಜಾರ್, ಮಲ್ಲೇಶ್ವರಂ ಪ್ರದೇಶಗಳಲ್ಲಿ ಅಹಿಂದ ವರ್ಗಕ್ಕೆ ಮನೆ ಮಾರಾಟಕ್ಕಲ್ಲ, ಬಾಡಿಗೆಗೂ ನೀಡುವುದಿಲ್ಲ. ವಿರೋಧಿಸಲು ಮುಂದಾದರೆ ಇವರುಗಳ ದೇಶಭಕ್ತಿಯನ್ನು ಕೀಳಾಗಿ ಚಿತ್ರಿಸಿ, ಜಾತಿವಾದಿಗಳೆಂಬ ಹಣೆಪಟ್ಟಿ ಕಟ್ಟಿಬಿಡುತ್ತಾರೆ. ಹೀಗೆ ವಿರೋಧಿಸುವ ವಿಕೃತರಿಗೆ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ, ಸಹಬಾಳ್ವೆ, ಸಮಾನತೆ ಬೇಕಿಲ್ಲ. ಇಂತಹ ವಿಕೃತರಿಗೆ ಅರಿವೇ ಇಲ್ಲದ ಪ್ರಜಾಪ್ರಭುತ್ವದ ಕಾವಲುಗಾರರು ಬೆನ್ನೆಲುಬಾಗಿ ನಿಂತು, ಒಂದು ವರ್ಗದ ಅನುಕಂಪ ಅಂಧಪ್ರೀತಿ, ವಿಶ್ವಾಸ ಗಳಿಸಿಕೊಟ್ಟು ‘ಚುನಾವಣೆ’ ಎಂಬ ಪರೀಕ್ಷೆಯಲ್ಲಿ ದಡ ಮುಟ್ಟಿಸಿಬಿಡುತ್ತಾರೆ. ಒಂದು ಧರ್ಮದವರ ಅತಿ ಉತ್ಸಾಹಕ್ಕೆ ಆರ್ಥಿಕ ಪ್ರಜಾಪ್ರಭುತ್ವ ಹಿನ್ನೆಡೆ ಅನುಭವಿಸುತ್ತಿದೆ. ‘ಸಾಂಸ್ಕೃತಿಕ ದೇಶಭಕ್ತಿ’ ಹೆಸರಲ್ಲಿ ಹಲ್ಲೆ, ದೊಂಬಿ ನಡೆಯುತ್ತಿದೆ. ಇಂತಹ ಪುಂಡಾಟವನ್ನು ಕೆಲವು ಸಂಘಟನೆಗಳು ಬೆಂಬಲಿಸುತ್ತಿವೆ. ಪ್ರಜಾಪ್ರಭುತ್ವ ಮೂರು ಪದಾರ್ಥಗಳನ್ನು ಒಳಗೊಂಡಿದೆ. ಅದು ಸಾಮಾಜಿಕ, ರಾಜಕೀಯ, ಆರ್ಥಿಕ. ಇದನ್ನು ಸಾಮಾಜಿಕ ಪ್ರಜಾಪ್ರಭುತ್ವ, ರಾಜಕೀಯ ಪ್ರಜಾಪ್ರಭುತ್ವ, ಆರ್ಥಿಕ ಪ್ರಜಾಪ್ರಭುತ್ವ ಎನ್ನಬಹುದು. ಇವಿಲ್ಲದೆ ಪ್ರಜಾಪ್ರಭುತ್ವ ಪೂರ್ಣವೇ ಅಲ್ಲ. 

ರಾಜಕೀಯ ಪ್ರಜಾಪ್ರಭುತ್ವ ಎಂದರೆ ಸಾರ್ವತ್ರಿಕ ವಯಸ್ಕ ಮತದಾರ ಅಂದರೆ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಗಾಗಿ ಯಾವುದೇ ತಾರತಮ್ಯ ಎಸಗದೆ ಮತದಾನ ಮಾಡಲು ಅವಕಾಶ ಒದಗಿಸಿಕೊಟ್ಟಿರುವುದು. ಸಾಮಾಜಿಕ ಪ್ರಜಾಪ್ರಭುತ್ವ ಎಂದರೆ ಜಾತಿ, ಧರ್ಮ, ಲಿಂಗಬೇಧವಿಲ್ಲದೆ ನಡೆದುಕೊಳ್ಳುವುದು. ಜನರ ಮೂಲವನ್ನು ನೋಡದೆ ಸರ್ವರನ್ನೂ ಸಮಾನವಾಗಿ ಕಾಣಬೇಕೆಂಬುದು ಸಾಮಾಜಿಕ ಪ್ರಜಾಪ್ರಭುತ್ವದ ಮೂಲ ತತ್ವವಾಗಿದೆ. 

ಆರ್ಥಿಕ ಪ್ರಜಾಪ್ರಭುತ್ವ ಎಂದರೆ ದೇಶದ ಎಲ್ಲಾ ಜನರು ಕಾನೂನಿನಂತೆ ತಮಗೆ ಬೇಕಾದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಕಾನೂನುಬದ್ಧವಾಗಿ ಆರ್ಥಿಕವಾಗಿ ಸಬಲರಾಗಲು ವಾಣಿಜ್ಯ ಚಟುವಟಿಕೆ ಕೂಡ ನಡೆಸಬಹುದು. ಇದರ ನಡುವೆ, ಅನಾದಿ ಕಾಲದಿಂದಲೂ ಅವಕಾಶಗಳಿಂದ ವಂಚನೆಗೊಂಡ ಸಮುದಾಯಗಳನ್ನು ಗುರ್ತಿಸಿ ಅಂಥವರಿಗೆ ‘ವಿಶೇಷ ಅವಕಾಶ’ ಕಲ್ಪಿಸಿಕೊಡುವುದನ್ನು ಅಡ್ಡಿಪಡಿಸುವಂತಿಲ್ಲ. 

ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರಕಾರ ಪ್ರಜಾಪ್ರಭುತ್ವ ಎಂದರೆ ಸರ್ಕಾರ ರಚಿಸುವುದು ಮಾತ್ರವಲ್ಲ, ಒಂದು ಉತ್ತಮ ಸಮಾಜವನ್ನು ಕೂಡ ರಚಿಸುವುದು ಆಗಿದೆ. ಉತ್ತಮ ಸಮಾಜ ನಾಲ್ಕು ಮಾನವೀಯ ಸದ್ಗುಣಗಳ ತತ್ವವನ್ನು ಹೊಂದಿರುತ್ತದೆ. ಅವು ‘ನ್ಯಾಯ’, ‘ಸಮಾನತೆ’, ‘ಸ್ವಾತಂತ್ರ್ಯ’, ‘ಭ್ರಾತೃತ್ವ’ ಆಗಿರುತ್ತದೆ. ಇಷ್ಟಕ್ಕೂ ಪ್ರಜಾಪ್ರಭುತ್ವವನ್ನು ಹೇರುವುದಲ್ಲ. ಬದಲಿಗೆ ಅದು ತನ್ನೊಳಗೆ ಹುಟ್ಟಿಬರಬೇಕು. ಇಂಥದ್ದೊಂದು ನಿರೀಕ್ಷೆಯನ್ನು ನಮ್ಮ ದೇಶದ ಸಾಮಾಜಿಕ ಸನ್ನಿವೇಶ, ಸಂದರ್ಭವನ್ನು ಅವಲೋಕಿಸಿದರೆ ಸಾಧ್ಯವಿಲ್ಲ ಎನಿಸುತ್ತದೆ. ಕಾರಣ, ನಮ್ಮ ಸಮಾಜ ಊಳಿಗಮಾನ್ಯ ಹಾಗೂ ಜಾತಿ ಆಧಾರಿತದಿಂದ ಕೂಡಿದೆ. ಇಲ್ಲಿ ಮಗು ಹುಟ್ಟಿದ ಕೂಡಲೇ ಜಾತಿಯಿಂದ ಗುರ್ತಿಸುತ್ತಾರೆ. ಇದು ತಾರತಮ್ಯವೂ ಮತ್ತು ಪ್ರಜಾಪ್ರಭುತ್ವ ವಿರೋಧಿಯೂ ಆಗಿರುತ್ತದೆ. ಹೀಗಾಗಿಯೇ ನಮ್ಮ ದೇಶದ ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಪ್ರಧಾನ ಉದ್ದೇಶವನ್ನು ಸೇರ್ಪಡಿಸಲಾಗಿದೆ. ನಮ್ಮ ದೇಶ ಸಂವಿಧಾನವನ್ನು ಸ್ವೀಕರಿಸಿದ ಬಳಿಕ ನಮ್ಮ ಸಮಾಜವನ್ನು ಪ್ರಜಾಸತ್ತಾತ್ಮಕವಾಗಿ ರೂಪಾಂತರಗೊಳಿಸಲು ಪ್ರಯತ್ನಿಸಲಾಗಿದೆ. ಇದರಿಂದ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವ ಸ್ಥಾಪನೆಯಾಗಲು ಅನುವಾಗಿದೆ. ‘ಸಾಮಾಜಿಕ’ ಮತ್ತು ‘ಆರ್ಥಿಕ’ ಪ್ರಜಾಪ್ರಭುತ್ವ ಇಲ್ಲದೆ ‘ರಾಜಕೀಯ ಪ್ರಜಾಪ್ರಭುತ್ವ’ ಹುಸಿ ಎನಿಸುತ್ತದೆ. 

ನಮ್ಮ ಸ್ವಾತಂತ್ರ್ಯ ಚಳುವಳಿ ನಮಗೆ ಉದಾರವಾದ ಸಮಾನತೆ, ಮೂಲಭೂತ ಹಕ್ಕುಗಳ ಅವಶ್ಯಕತೆ ಕುರಿತಂತೆ ಅರಿವು ಮೂಡಿಸಿತು. ಇದರಂತೆ ಸಂವಿಧಾನದಲ್ಲಿ ಅಳವಡಿಕೆಯೂ ಆಯಿತು. ‘ಕಾನೂನಿನ ಆಳ್ವಿಕೆ’, ‘ಸಮಾನತೆ’, ‘ನ್ಯಾಯ’, ‘ಮೌಲ್ಯ’ ಇವು ಪ್ರಜಾಪ್ರಭುತ್ವವನ್ನು ಉತ್ತೇಜಿಸುತ್ತವೆ. ಇಲ್ಲಿ ಧರ್ಮ ಎಂಬುದು ಒಂದು ವಿಧಾನ. ಇದರ ಉಗ್ರ ಪ್ರತಿಪಾದನೆ ಸರ್ವ ಜನಾಂಗದ ಶಾಂತಿಯ ತೋಟವನ್ನು ಕದಡುತ್ತದೆ. ಚುನಾವಣಾ ಸಂಸದೀಯ ಪ್ರಜಾಪ್ರಭುತ್ವ ಬಹುಮತ ಆಧಾರಿತವಾಗಿದೆ. ಇದು ಯಾವ ಪಕ್ಷ ಅಧಿಕಾರ ನಡೆಸಬೇಕೆನ್ನುವುದನ್ನು ನಿರ್ಧರಿಸುತ್ತದೆ. ಕಾನೂನು ರೂಪಿಸುವಿಕೆ ಮತ್ತು ಆಳ್ವಿಕೆ ಪ್ರಶ್ನೆ ಬಂದಾಗ ಇದು ಮೂಲಭೂತ ಎನಿಸಿಕೊಳ್ಳುತ್ತದೆ. ಕಾರಣ, ಬಹುಮತ ಎನ್ನುವುದು ಒಂದೇ ತೆರನಾಗಿ ಇರುವುದಿಲ್ಲ. 

ಪ್ರಸ್ತುತ ಇರುವ ಪಿರಮಿಡ್ ಮಾದರಿಯ ಕೇಂದ್ರ ಸರ್ಕಾರವನ್ನು ಭಾಜಪದ ಹಳೆ ತಲೆಗಳು ಟೀಕಿಸಿದ್ದಾರೆ. ಭಾಜಪ ಬಹಳ ಹಿಂದಿನಿಂದಲೂ ರಾಜಕೀಯ ಹೂಡಿಕೆಯೊಂದಿಗೆ ಸಾಗುತ್ತಾ ಬಂದಿದೆ. ಇದು ರಾಜಕೀಯ, ಸಂಸ್ಕೃತಿಯಲ್ಲಿ ಸರ್ವಾಧಿಕಾರತ್ವದ ಹೂರಣವನ್ನು ತುಂಬಿ ಇಟ್ಟಿದೆ. ಇನ್ನೂ ಕಾಂಗ್ರೆಸ್ ಮೊದಲಿನಿಂದಲೂ ವಂಶಾಡಳಿತ ಪಕ್ಷ. ಹಾಗಂತ ಭಾಜಪಗೆ ಶಹಬ್ಬಾಸ್ ಗಿರಿ ಕೊಡುವಂತಿಲ್ಲ. ಕಾರಣ ಭಾಜಪ ವ್ಯಕ್ತಿ ಕೇಂದ್ರಿತ ಪಕ್ಷ. ಭಾಜಪದಲ್ಲಿಂದು ಮೋದಿ – ಅಮಿತ್ ಷಾ ಮಾತೇ ಅಂತಿಮ. ಇದನ್ನು ದಕ್ಷಿಣ ಕನ್ನಡದ ಕಲ್ಲಡ್ಕ ಪ್ರಭಾಕರ ಭಟ್ಟರು ಕೂಡ ವಿರೋಧಿಸಿದ್ದಾರೆ. ಹೀಗಾಗಿ ಇದೇ ಅಪಾಯಕಾರಿ ಎನಿಸುತ್ತದೆ. 

ಕಳೆದ ವರ್ಷ ಸೆಪ್ಟಂಬರ್‍ನಲ್ಲಿ ಸ್ವಾಮಿ ವಿವೇಕಾನಂದರ ಭಾಷಣ ಮಾಡಿದ 125ನೇ ಜಯಂತಿಯು ವಿಶ್ವ ಹಿಂದೂ ಸಮ್ಮೇಳನ ನಡೆದ ಚಿಕಾಗೋದಲ್ಲಿ ನಡೆಯಿತು. ಅಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಸಿಂಹ ವೇಷ ಧರಿಸಿದ ಓರ್ವ ಕ್ರೈಸ್ತನಂತೆ ನಿಂದಿಸಲಾಯಿತು. ಮಹಾತ್ಮನ ಹತ್ಯೆ ದೈವ ದಂಡನೆ ಎಂಬ ವಾದವೂ ಮಂಡನೆಯಾಯಿತು. ಇವತ್ತು ಇಸ್ಲಂ ಧರ್ಮಿಯರ ಮೇಲೆ ದಾಳಿ ಮಾಡುತ್ತಿರುವವರು ಗೋಡ್ಸೆಯಂತೆ ಸಮುದಾಯದ ಒಂದು ಭಾಗವಲ್ಲ. ಉಗ್ರ ಹಿಂದುತ್ವದ ಪ್ರತಿಪಾದಕರ ಕಾಲಾಳುಗಳಾಗಿದ್ದಾರೆ. 

ನಮ್ಮ ದೇಶ ಸಂವಿಧಾನ ಸ್ವೀಕರಿಸಿ 78 ವರ್ಷಗಳಾದರೂ, ನಮ್ಮ ಪ್ರಜಾಪ್ರಭುತ್ವ ಪ್ರಯೋಗಶೀಲತೆಯಿಂದಲೇ ಕೂಡಿದೆ. ಪ್ರಜಾಪ್ರಭುತ್ವ ಪ್ರಕ್ರಿಯೆಯಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಲವು ಬಾರಿ ಬದಲಾಗಿವೆ. ಅದು ಚುನಾವಣೆಯ ಮೂಲಕವೇ ಆಗಿದೆ. ಅದರಲ್ಲೂ ನಡೆದಿರುವ ಚುನಾವಣೆಗಳು ಭಾಗಶಃ ಶಾಂತಿಯುತವಾಗಿಯೇ ನಡೆದಿವೆ. ಇದೇ ಪ್ರಜಾಪ್ರಭುತ್ವದ ಬಹುದೊಡ್ಡ ಸಾಧನೆಯಾಗಿದೆ. ಇದನ್ನೇಕೆ ಹೆಮ್ಮೆಯಿಂದ ಹೇಳುತ್ತಿರುವೆ ಎಂದರೆ, ನಮ್ಮ ದೇಶದೊಂದಿಗೆ ಸ್ವಾತಂತ್ರ್ಯ ಪಡೆದ ಹಲವು ರಾಷ್ಟ್ರಗಳಲ್ಲಿ ಕ್ಷಿಪ್ರಕ್ರಾಂತಿ ನಡೆದಿವೆ. ಏಕಪ್ರಭುತ್ವ ಉದಯವಾಗಿದೆ. ಸೇನಾ ಮುಖ್ಯಸ್ಥರು ರಾಷ್ಟ್ರದ ಚುಕ್ಕಾಣಿ ಹಿಡಿದಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಇದುವರೆಗೂ ಇಂತಹ ಯಾವುದೇ ಅವಘಡಗಳು ಸಂಭವಿಸಿಲ್ಲ. ರಾಜಕೀಯ ಪ್ರಜಾಪ್ರಭುತ್ವದ ಬೇರುಗಳಿಲ್ಲಿ ಆಳವಾಗಿ ಬೇರೂರಿದೆ. ಇದರ ಸಂಪೂರ್ಣ ಹೆಗ್ಗಳಿಕೆ ನಮ್ಮೆಲ್ಲರದ್ದೂ ಆಗಿದೆ. 

ಇದೇನೆ ಇದ್ದರೂ, ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣವಾಗಿ ಸಾಧನೆ ಮಾಡಿಲ್ಲ. ‘ರಾಜಕೀಯ ಪ್ರಜಾಪ್ರಭುತ್ವ’ ಬೇರುಬಿಟ್ಟು ಬೆಳೆದಷ್ಟು ‘ಆರ್ಥಿಕ ಪ್ರಜಾಪ್ರಭುತ್ವ’ ಮತ್ತು ‘ಸಾಮಾಜಿಕ ಪ್ರಜಾಪ್ರಭುತ್ವ’ ನೆಲೆಯನ್ನೇ ಕಂಡಿಲ್ಲ. ಭವಿಷ್ಯದಲ್ಲಿಯಾದರೂ ಇವೆರೆಡೂ ಪ್ರಜಾಪ್ರಭುತ್ವವನ್ನು ಕಾಣುತ್ತವೆಯೋ ಎಂದು ಚಿಂತಿಸಿದರೆ, ಅದು ಅಷ್ಟು ಸುಲಭವಾಗಿ ಅಂದಾಜಿಗೆ ಸಿಗುತ್ತಿಲ್ಲ. ಕಾರಣ, ನಮ್ಮ ದೇಶದ ಬಹುಸಂಖ್ಯಾತ ಜನ ಬಡತನದಲ್ಲಿಯೇ ಬೇಯ್ಯುತ್ತಿದ್ದಾರೆ. ಕನಿಷ್ಟ ಸೌಲಭ್ಯವಾದ ಶೌಚಾಲಯ, ಸ್ನಾನದ ಗೃಹ, ನೆಲೆ ನಿಲ್ಲಲು ಸೂರು ಇಲ್ಲದೆ ಇದ್ದಾರೆ. ಇದಕ್ಕೆಲ್ಲವೂ ನಮ್ಮನ್ನಾಳಿದವರೇ ಕಾರಣ ಎನ್ನಬಹುದು. ಇವರೇ ದೇಶಕ್ಕೆ ಬೇಕಾದ ಕಾನೂನು ರೂಪಿಸುವವರು ಮತ್ತು ಸೃಷ್ಟಿಸುವವರು. ಹಾಗೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ರಚಿಸಿ, ಆಡಳಿತ ವರ್ಗವನ್ನು ನಿಯಂತ್ರಿಸುವವರಾಗಿದ್ದಾರೆ. ಇಂತಹ ಬಹುದೊಡ್ಡ ಜವಾಬ್ದಾರಿ ಮತ್ತು ನಂಬಿಕೆ ಹೊತ್ತ ಕೇಂದ್ರ, ರಾಜ್ಯ ಸರ್ಕಾರಗಳು ಬಹುಸಂಖ್ಯಾತ ಜನರ ನಿರೀಕ್ಷೆ ಮತ್ತು ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಚುನಾವಣಾ ಪೂರ್ವದಲ್ಲಿ ಜನರ ನಿರೀಕ್ಷೆಗಳನ್ನು ಹಿಡಿದಿಟ್ಟುಕೊಳ್ಳಲು ಹೊರತರುವ ಪ್ರಣಾಳಿಕೆಯನ್ನೇ ಅಧಿಕಾರ ಹಿಡಿದ ನಂತರ ಮರೆತು ಬಿಡುವವರ ಸಂಖ್ಯೆ ಹೆಚ್ಚಾಗಿದೆ. ಇಂತಹವುಗಳಿಗೆಲ್ಲ ಮೂಲ ‘ಭ್ರಷ್ಟಾಚಾರ’. ಇದು ವ್ಯವಸ್ಥೆಯ ಕೂಸು. ಉಪ ಉತ್ಪನ್ನವೂ ಆಗಿದೆ. ಹಲವು ವಿಧಗಳಲ್ಲಿ ಹಲವರ ಜೇಬು ಸೇರುವ ‘ಭ್ರಷ್ಟಾಚಾರ’ ಕೊನೆಗಾಣಿಸಲು ನಾವಿನ್ನೂ ಸರ್ವಶಕ್ತರಾಗಿಲ್ಲ. ಇದರಿಂದಾಗಿ ನಮ್ಮ ದೇಶ ಭ್ರಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನವನ್ನು ಹೊಂದಿದೆ. 

ಇದಿರಲಿ, ಚಿಕಾಗೋ ಸಮ್ಮೇಳನದಲ್ಲಿ ಮೋಹನ್ ಭಾಗವತ್ ಅವರು ಆಡಿದ ಮಾತುಗಳು ಚಿಂತೆಗೆ ದೂಡುತ್ತವೆ. ಹಿಂದೂಗಳನ್ನು ಒಟ್ಟುಗೂಡಿಸುವುದು ಕಷ್ಟಕರ ಎಂದಿದ್ದಾರೆ. ಇಲ್ಲಿ ಅನ್ಯ ಧರ್ಮಿಯರ ಏಕತೆ ಭಿನ್ನಾಭಿಪ್ರಾಯವಲ್ಲ. ಇದು ಸಾಮಾಜಿಕ ಮತ್ತು ಸಾಂಸ್ಕøತಿಕ ವೈವಿಧ್ಯತೆಗೆ ಸಾಕ್ಷಿಯಾಗಿದೆ. ಇದು ನಮ್ಮ ದೇಶದ ವಿಶೇಷ. ಇದು ಒಂದು ಧರ್ಮಿಯರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಕಾರಣ, ಇವರುಗಳು ಧರ್ಮದ ಆಧಾರದ ಮೇಲೆ ದೇಶವಾಳಲು ಹೊರಟಿದ್ದಾರೆ. ಎಡಪಂಥೀಯ ವಿಚಾರಧಾರೆ ಕೆಲವು ಮನಸ್ಥಿತಿಯವರಿಗೆ ಪ್ರಬಲವಾಗಿ ಸೆಡ್ಡು ಹೊಡೆದಿದೆ. ಇದು ಸವಲತ್ತು ಕಾಣದ ಜಾತಿಗಳ ಚಳವಳಿಯಿಂದ ಮೂಡಿ ಬಂದಿದೆ. ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು 1938ರಂದು ಮಾಡಿದ ಭಾಷಣ ನೆನಪಾಗದೇ ಇರದು. ದೇಶದ ಪರಿಕಲ್ಪನೆ ಬಗ್ಗೆ ಅದ್ಭುತವಾಗಿ ಹೇಳಿದ್ದಾರೆ. ‘ಸಾಮಾನ್ಯರ ಸರ್ಕಾರ’ ‘ಗೌರವಾನ್ವಿತತೆ, ‘ನ್ಯಾಯಾಂಗ ದಾಖಲೆ’, ‘ಸಂವಿಧಾನ’ ಇವು ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸುತ್ತದೆ. ಜೊತೆಗೆ ನಾವೆಲ್ಲರೂ ‘ಭಾರತೀಯರು’ ಎಂಬ ಚಿಂತನೆಯನ್ನು ಕಟ್ಟಿಕೊಟ್ಟಿದೆ. ಅಲ್ಲದೆ ‘ಸಾಮಾಜಿಕ ಏಕತೆ’ಯನ್ನು ಮೂಡಿಸಿದೆ. ಇದನ್ನೆಲ್ಲವನ್ನೂ ಕಂಡಾಗ ಹಿಂದೂ ಸಮಾಜ ನಿರ್ಮಾಣ ಆಗದಿರಲು ‘ಏಕತೆ’ಯ ಕೊರತೆಯೇ ಕಾರಣ ಎಂದೆನಿಸದೆ ಇರಲಾರದು. ಪ್ರತಿಮೆ ನಿರ್ಮಾಣ. ರಸ್ತೆ, ರೈಲು ನಿಲ್ದಾಣಗಳ ಹೆಸರು ಬದಲಾವಣೆಗಳೆಲ್ಲವೂ ಭಾರತೀಯ ಇತಿಹಾಸವನ್ನು ಮತ್ತು ಸಂಸ್ಕೃತಿಯನ್ನು ಹಿಂದೂಕರಣಗೊಳಿಸುವ ಹುನ್ನಾರ ಎನ್ನಬಹುದು. 

ದೇಶದ ಸಂಪನ್ಮೂಲ ಮತ್ತು ತೆರಿಗೆದಾರರ ಹಣವನ್ನು ನಾಗರಿಕರ ಕಲ್ಯಾಣಕ್ಕೆ ಬಳಸಬೇಕು. ವಿಶೇಷವಾಗಿ ಬಡವರಿಗೆ, ಅವಕಾಶ ವಂಚಿತರ ಅಭ್ಯುದಯಕ್ಕೆ ಬಳಸಬೇಕು. ಬಂಡವಾಳಶಾಹಿಗಳು ಇಂತಹ ಧನವನ್ನು ಯೋಜನೆಗಳ ಹೆಸರಲ್ಲಿ ಬಾಚಿಕೊಳ್ಳುತ್ತಿದ್ದಾರೆ. ಹಾಗೆಯೇ ಹಗರಣಗಳ ಮೇಲೆ ಹಗರಣಗಳನ್ನು ಎಸಗುತ್ತಿದ್ದಾರೆ. ಉದಾಹರಣೆಗೆ ಓಔಓ PಇಖಈಔಖಒIಓಉ ಂSSಇಖಿS (ಓPಂ) ಮತ್ತು ರಫೇಲ್ ಡೀಲನ್ನು ನೋಡಬಹುದು. ಇಲ್ಲಿ ‘ಸಾಮಾಜಿಕ ನ್ಯಾಯ’, ಆರ್ಥಿಕ ನ್ಯಾಯ; ಒದಗಿಸಿ ಕೊಡುವ ಉದ್ದೇಶಕ್ಕೆ ಎಳ್ಳು-ನೀರು ಬಿಡಲಾಗಿದೆ. 

ನಾವು ಸರ್ವತಂತ್ರ ಸ್ವತಂತ್ರರು. ಆದರೂ ನಮ್ಮಲ್ಲಿ ಭಿಕ್ಷುಕರಿದ್ದಾರೆ. ಅನಕ್ಷರಸ್ಥರಿದ್ದಾರೆ. ಅಪೌಷ್ಟಿಕತೆಯಿಂದ ನರಳುವವರಿದ್ದಾರೆ. ಧೀರ್ಘಕಾಲದ ರೋಗ-ರುಜಿನಗಳಿಗೆ ತುತ್ತಾದವರಿದ್ದಾರೆ. ಇದು ನಗರ, ಗ್ರಾಮೀಣ ಭಾರತದ ಸ್ಥಿತಿಯೂ ಆಗಿದೆ. ಅನುಮೋದನೆಗೊಳ್ಳದ ಬಡಾವಣೆ, ಗಾಳಿ-ಬೆಳಕಿಲ್ಲದ ಕಟ್ಟಡಗಳು ತಲೆ ಎತ್ತಿವೆ. ಇಂತಹವಕ್ಕೆ ಭ್ರಷ್ಟ ಅಧಿಕಾರಿಗಳ, ರಾಜಕಾರಣಿಗಳ ಕುಮ್ಮಕ್ಕು ಇದೆ. ‘ಮತಬ್ಯಾಂಕ್’ಗಾಗಿ ರಾಜಕಾರಣಿಗಳು ಕೊಳಗೇರಿಗಳನ್ನು ತಮ್ಮ ಕ್ಷೇತ್ರಗಳಲ್ಲಿ ಬೆಳೆಸಿಕೊಳ್ಳುತ್ತಿದ್ದಾರೆ. ನಗರದಲ್ಲಿದ್ದ ವಿಶಾಲವಾದ ಮೋರಿ, ರಾಜಕಾಲುವೆಗಳೆಲ್ಲವೂ ಒತ್ತುವರಿಯಾಗಿಬಿಟ್ಟಿವೆ. ಇದಲ್ಲದೆ ವಾಯು ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ಭೀಕರ ಪರಿಣಾಮ ಬೀರಿದೆ. ಇದರಿಂದ ಬಹುಪಾಲು ನಗರವಾಸಿಗಳು ರೋಗಗ್ರಸ್ಥರಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಂತೂ ಬಯಲೇ ಶೌಚಾಲಯ. ಇಲ್ಲಿ ಯಾವುದೇ ನಾಗರಿಕ ಸೌಲಭ್ಯವೂ ಇರುವುದಿಲ್ಲ. ಇದಕ್ಕೆ ಪರಿಹಾರ ಹುಡುಕುತ್ತಾ ಸಾಗಿದರೆ ನಮ್ಮ ಚುನಾವಣೆ ವ್ಯವಸ್ಥೆ ಮತ್ತು ಚುನಾವಣಾ ಆಯೋಗ ಕಂಡು ಬರುತ್ತದೆ. 

ಇನ್ನೂ ನಮ್ಮ ಜನಪ್ರತಿನಿಧಿಗಳ ಬಗ್ಗೆ ಹೇಳಲು ಸಂಕೋಚವಾಗುತ್ತದೆ. ಇವರುಗಳು ಕೇಂದ್ರ, ರಾಜ್ಯ ಮಂತ್ರಿಯಾದರೂ, ಮುಖ್ಯಮಂತ್ರಿಯಾದರೂ, ಜನಪರವಾಗಿ ಚಿಂತಿಸುವವರು ಕಡಿಮೆ. ಇದರಲ್ಲಿ ಬಹುತೇಕ ಜನ ತಮ್ಮ ಆದಾಯಕ್ಕಿಂತ ದುಪ್ಪಟ್ಟು ಆಸ್ತಿ ಹೊಂದಿದ್ದಾರೆ. ಹಗರಣಗಳು ಸುತ್ತಿಕೊಂಡು, ಮೆತ್ತಿಕೊಂಡಿದ್ದರೂ, ಮೀಸೆ ಮಣ್ಣಾಗಲಿಲ್ಲ ಎಂದು ತಿರುಗುತ್ತಾರೆ. ಇದೊಂದು ಬಗೆಹರಿಯದ ಸಮಸ್ಯೆಯಾಗಿರುವುದು ದುರದೃಷ್ಟಕರ. ಇವರಿಂದಾಗಿ ನಮ್ಮ ಸಾಮಾಜಿಕ, ರಾಜಕೀಯ ಬೆಳವಣಿಗೆ ದ್ವಿಗುಣಗೊಳ್ಳುತ್ತಿಲ್ಲ. ದೇಶದ ಬಹುಸಂಖ್ಯಾತ ಜನ ‘ರಾಷ್ಟ್ರೀಯ ಆದಾಯ’ದಲ್ಲಿ ಪಾಲು ಪಡೆಯಲು ವಿಫಲರಾಗಿದ್ದಾರೆ. ಅಸಮಾನತೆಗೆ ತುತ್ತಾಗಿದ್ದಾರೆ. ಇವರುಗಳಿಂದ ಆದಾಯ, ಸಂಪತ್ತು, ಸಂಪನ್ಮೂಲ ಲೂಟಿಯಾಗುವುದನ್ನು ತಡೆಯಬೇಕಾದ ಜವಾಬ್ದಾರಿ ಮಾಧ್ಯಮದ ಮೇಲಿದೆ. ಇದಕ್ಕಾಗಿ ಕೆಲವು ಸ್ವಾರ್ಥ, ದೌರ್ಜನ್ಯ ಮನೋಭಾವದ, ಕ್ರಿಮಿನಲ್ ಹಿನ್ನೆಲೆಯುಳ್ಳ ಶಕ್ತಿಗಳನ್ನು ಶಾಸಕಾಂಗ ಪ್ರವೇಶಿಸದಂತೆ ತಡೆಹಿಡಿಯಬೇಕಿದೆ. ಇಂತಹದ್ದೊಂದು ಕಾರ್ಯವನ್ನು ಚುನಾವಣಾ ಆಯೋಗ ಮಾಡುವಂತಾಗಬೇಕು. ಜೊತೆಗೆ ಚುನಾವಣಾ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ತರಬೇಕು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ನಮ್ಮದೆಂದು ದೇಶವನ್ನು ಉತ್ಸವಮೂರ್ತಿ ಮಾಡುವುದು ಬೇಡ. ಪ್ರಜಾಪ್ರಭುತ್ವ ಇನ್ನಷ್ಟು ಪರಿಣಾಮಕಾರಿಯಾಗಿ ವಿಸ್ತರಿಸಲು, ಗುಣಮಟ್ಟ ಮತ್ತು ಮೌಲ್ಯಗಳನ್ನು ಸೇರ್ಪಡಿಸುವ ಕೆಲಸ ಆಗಬೇಕಿದೆ. ಸಾಮಾನ್ಯ ಜನರ ಆಕಾಂಕ್ಷೆಗಳಿಗನುಸಾರವಾಗಿ ಸಾಗುವ ಪ್ರಜಾಪ್ರಭುತ್ವ ನಮಗೆ ಬೇಕಿದೆ. ಅಲ್ಲದೆ ಸಿಗಲೂ ಬೇಕಿದೆ. 

ಇಂದಿನ ರಾಜಕಾರಣವನ್ನು ಅವಲೋಕಿಸಿದಾಗ ‘ಹಣ’ ನಮ್ಮ ದೇಶಾದಲ್ಲಿ ಒಂದು ಸಂಘಟಿತ ಶಕ್ತಿಯಗಿ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದೇ ಭಾವಿಸಬಹುದು. ಇದರ ಜೊತೆಗೆ ಧರ್ಮ, ದೇಶಭಕ್ತಿ, ರಾಷ್ಟ್ರೀಯತೆ ಕೂಡ ಸೇರಿ ಜನರನ್ನು ಉನ್ಮಾದದಲ್ಲಿ ತೇಲುವಂತೆ ಮಾಡಲಾಗಿದೆ. ನನಗಿಲ್ಲಿ ಒಂದು ಪ್ರಶ್ನೆ ಕಾಡುತ್ತಿದೆ. ನಮ್ಮನ್ನು ಆಳುವುದು ಯಾರು? ಧರ್ಮವೇ? ರಾಷ್ಟ್ರೀಯತೆಯೇ? ಹಣವೇ? ಬೌದ್ಧಿಕತೆಯೇ? ಅಥವಾ ಮರೆಯಲ್ಲಿ ನಿಂತು ಹಣ ಹೂಡುತ್ತಿರುವ ಹೂಡಿಕೆದಾರರೇ? 

ಹಿಂದೆ ಕಾಮರಾಜ, ಅಂಬೇಡ್ಕರ್, ನೆಹರು, ಪೆರಿಯಾರ್, ಇಂದಿರಾಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂತಹ ನಾಯಕರಿದ್ದರು. ಈಗ ದೇಶ ಸೇವೆಗಿಂತ ಸ್ವಾರ್ಥ ಸೇವೆಗೆ ಮೀಸಲಾದ ನಾಯಕರಿದ್ದಾರೆ. ಇಂತಹವರಲ್ಲಿ ಪದವಿ ಹೊಂದಿಲ್ಲದವರು ಮಾತ್ರವಲ್ಲ, ದೇಶೀಯ ವಿ.ವಿ.ಯಲ್ಲಿ ಪದವಿ ಪಡೆದವರು, ವಿದೇಶಿ ವಿ.ವಿ.ಯಲ್ಲಿ ಪದವಿ ಪಡೆದವರು ಇದ್ದಾರೆಂಬುದೇ ಅತ್ಯಂತ ಯಾತನಾದಾಯಕ ಸಂಗತಿ. ಇದರ ಅರಿವಿದ್ದರೂ, ಅರಿವು ಮೂಡಿಸಿದರೂ ನಮ್ಮ ಜನಕ್ಕೆ ಅಣ್ಣನೇ ಬೇಕು. 

ರಾಜಕಾರಣ ಎಂಬುದು ದುಡ್ಡು ಗೆಬರುವ ಯಂತ್ರವಲ್ಲ. ಸಹಿ ಮಾಡಿದರೆ ಲೂಟಿ ಮಾಡುವ ಕಡತವೂ ಅಲ್ಲ. ದೇಶ ಮತ್ತು ಜನರನ್ನು ಅಭ್ಯುದಯದತ್ತ ಸಾಗಿಸುವ ಒಂದು ಸಲಕರಣೆ. ಈ ಉದ್ದೇಶವನ್ನು ಅರ್ಥೈಸಿಕೊಳ್ಳಬೇಕು.