ತುಮಕೂರು: ಆಟೋ ಚಾಲಕನೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಜಿಲ್ಲೆಯ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿಯನ್ನು ಸೈಯದ್ (40) ಎಂದು ಗುರುತಿಸಲಾಗಿದ್ದು, ಈತ ತುಮಕೂರಿನ ಶಾಂತಿನಗರದ ಗೂಡ್ ಶೆಡ್ ಕಾಲೋನಿ ನಿವಾಸಿ. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಆರೋಪಿ ಸೈಯದ್, ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಸ್ ನಿಲ್ದಾಣದ ಬಳಿ ಓಡಾಡುತ್ತಿದ್ದ ಏಳು ವರ್ಷದ ಬಾಲಕಿಯನ್ನ ಪುಸಲಾಯಿಸಿದ್ದಾನೆ. ಬಳಿಕ ತನ್ನ ಆಟೋದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಟೋದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಇತ್ತ ಸೈಯದ್ ಬಾಲಕಿಯನ್ನು ಕರೆದೊಯ್ದಿರುವ ವಿಚಾರ ತಿಳಿದು ಸಾರ್ವಜನಿಕರು ಆತನನ್ನು ಹಿಂಬಾಲಿಸಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಇತ್ತ ಬಾಲಕಿಯನ್ನ ರಕ್ಷಿಸಿ ಆರೋಪಿಯನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.










