ಅಮರ್ ಜವಾನ್ ಜ್ಯೋತಿ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ವಿಲೀನ…

79
firstsuddi

ನವದೆಹಲಿ : ದೆಹಲಿಯ ಇಂಡಿಯಾ ಗೇಟ್ ನಲ್ಲಿ ಕಳೆದ 50 ವರ್ಷಗಳಿಂದ ಉರಿಯುತ್ತಿದ್ದ ಅಮರ್ ಜವಾನ್ ಜ್ಯೋತಿಯನ್ನು ಅಲ್ಲೇ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ವಿಲೀನಗೊಳಿಸಲಾಗಿದೆ. ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥ, ಏರ್ ಮಾರ್ಷಲ್ ಬಲಭದ್ರ ರಾಧಾಕೃಷ್ಣ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.

1947ರ ಬಳಿಕ ನಡೆದ ಭಾರತ-ಪಾಕಿಸ್ತಾನ ಯುದ್ಧ ಮತ್ತು ಚೀನಾ ಜತೆಗಿನ ಸಂಘರ್ಷದ ವೇಳೆ ಹುತಾತ್ಮರಾಗಿರುವ ಭಾರತೀಯ ಯೋಧರ ನೆನಪಿಗಾಗಿ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಸಲಾಗಿದ್ದು, ಇದೀಗ ಅದರೊಳಗೆ ಅಮರ್ ಜವಾನ್ ಜ್ಯೋತಿಯನ್ನು ವಿಲೀನಗೊಳಿಸಲಾಗಿದೆ.

ಅಮರ್ ಜವಾನ್ ಜ್ಯೋತಿಯನ್ನು ನಂದಿಸಲಾಗುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇದಕ್ಕೆ ಕೇಂದ್ರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಅಮರ್ ಜವಾನ್ ಜ್ಯೋತಿಯನ್ನು ನಂದಿಸಲಾಗುತ್ತಿಲ್ಲ. ಬದಲಿಗೆ ಅದನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ಯೋತಿಯೊಂದಿಗೆ ವಿಲೀನಗೊಳಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.