ಅರುಂಧತಿ ಸಿನಿಮಾ ನೋಡಿ ಬೆಂಕಿ ಹಚ್ಚಿಕೊಂಡ ಯುವಕ – ಚಿಕಿತ್ಸೆ ಫಲಿಸದೇ ಸಾವು…

58
firstsuddi

ತುಮಕೂರು : ಅರುಂಧತಿ ಸಿನಿಮಾ ನೋಡಿ ಅದರಿಂದ ಪ್ರಭಾವಿತನಾದ 22 ವರ್ಷದ ಯುವಕನೊಬ್ಬ ಮುಕ್ತಿ ಬೇಕೆಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಜಿಲ್ಲೆಯ ಮಧುಗಿರಿ ತಾಲೂಕಿನ ಕೊಂಡವಾಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರೇಣುಕಾ ಪ್ರಸಾದ್ (22) ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ಯುವಕ. ರಸ್ತೆ ಬದಿಯಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡ ರೇಣುಕಾ, ನಂತರ ಬೆಂಕಿ ಹಚ್ಚಿಕೊಂಡಿದ್ದಾನೆ. ಮೈಯೆಲ್ಲಾ ಬೆಂಕಿ ಹೊತ್ತು ಉರಿಯುತ್ತಿದ್ದಂತೆ ಕಿರುಚಲು ಪ್ರಾರಂಭಿಸಿದ್ದಾನೆ. ನೋವಿನಿಂದ ಒದ್ದಾಡುತ್ತಾ ರಸ್ತೆ ಮೇಲೆಲ್ಲ ಉರುಳಾಡಿದ್ದಾನೆ.

ಇದನ್ನು ನೋಡಿದ ಸ್ಥಳೀಯರು ಆತನ ಮೈಮೇಲಿದ್ದ ಬೆಂಕಿ ಆರಿಸಿ, ಮಧುಗಿರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.