ಅಲ್-ಖೈದಾ ಮುಖ್ಯಸ್ಥ ಅಯ್ಮಾನ್ ಅಲ್-ಜವಾಹಿರಿ ಹತ್ಯೆ…

50
firstsuddi

ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ನಡೆದ ಅಮೆರಿಕದ ಡ್ರೋನ್ ದಾಳಿಯಲ್ಲಿ ಅಲ್-ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿಯನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಅಮೆರಿಕದ ಅಧಿಕಾರಿಯ ಪ್ರಕಾರ, ಜವಾಹಿರಿ ಕಾಬೂಲ್ ನ ಸುರಕ್ಷಿತ ಗೃಹದಲ್ಲಿ ಆಶ್ರಯ ಪಡೆದಿದ್ದರು. ಜುಲೈ 31ರಂದು ರಾತ್ರಿ 9.48ಕ್ಕೆ ನಡೆದ ಡ್ರೋನ್ ದಾಳಿಯಲ್ಲಿ ಆತನನ್ನು ಕೊಲ್ಲಲಾಗಿದೆ.

ಈ ವಿಚಾರವನ್ನು ಸ್ವತಃ ಜೋ ಬೈಡೆನ್ ಖಚಿತಪಡಿಸಿದ್ದಾರೆ. ನಾವು ನ್ಯಾಯ ಕೊಟ್ಟಿದ್ದೇವೆ. ಉಗ್ರಗಾಮಿಗಳ ನಾಯಕ ಇನ್ನಿಲ್ಲ. ನಮ್ಮ ಜನರಿಗೆ ಬೆದರಿಕೆ ಹಾಕುವವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಎಷ್ಟೇ ಸಮಯವಾದರೂ, ಎಲ್ಲಿಯೇ ಇದ್ದರೂ, ಎಲ್ಲಿ ಅಡಗಿ ಕುಳಿತಿದ್ದರೂ ಅಂಥವರನ್ನು ಅಮೆರಿಕ ಕೊಲ್ಲುತ್ತದೆ ಎಂದು ಬೈಡೆನ್ ಶ್ವೇತಭವನದಿಂದ ಸಂಜೆಯ ಭಾಷಣದಲ್ಲಿ ಘೋಷಿಸಿದ್ದಾರೆ.

ಮೂಲತಃ ಈಜಿಪ್ಟ್ ನವನಾಗಿದ್ದ ಜವಾಹಿರಿ ಕೈರೊದಲ್ಲಿ ಬಾಲ್ಯ ಕಳೆದಿದ್ದ. ವೃತ್ತಿಯಲ್ಲಿ ಶಸ್ತ್ರಚಿಕಿತ್ಸಕನಾಗಿದ್ದ ಆತ, ನಂತರ ಹಿಂಸಾತ್ಮಕ ಮೂಲಭೂತವಾದದಲ್ಲಿ ತೊಡಗಿಕೊಂಡಿದ್ದ. 2001ರ ಸೆಪ್ಟೆಂಬರ್ 11ರಂದು ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದಿದ್ದ ದಾಳಿಯ ಪ್ರಮುಖ ಶಂಕಿತ ಸಂಚುಕೋರನೂ ಆಗಿದ್ದನು. ದಾಳಿ ಬಳಿಕ ತಲೆಮರೆಸಿಕೊಂಡಿದ್ದ. ಆತನ ಸುಳಿವು ನೀಡಿದವರಿಗೆ 2.5 ಕೋಟಿ ಡಾಲರ್ ಇನಾಮು ಘೋಷಿಸಲಾಗಿತ್ತು.

2011ರಲ್ಲಿ ಒಸಾಮಾ ಬಿನ್ ಲಾಡೆನ್ ನನ್ನು ಅಮೆರಿಕದ ವಿಶೇಷ ಪಡೆಗಳು ಹತ್ಯೆ ಮಾಡಿದ ಬಳಿಕ ಜವಾಹಿರಿ ಅಲ್-ಖೈದಾವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದ. ಜವಾಹಿರಿ ಮತ್ತು ಬಿನ್ ಲಾಡೆನ್ ಯುನೈಟೆಡ್ ಸ್ಟೇಟ್ಸ್ ಮೇಲಿನ 9/11 ದಾಳಿಯ ಮಾಸ್ಟರ್ ಮೈಂಡ್ ಗಳು. ಜವಾಹಿರಿ ಅಮೆರಿಕದ ಮೋಸ್ಟ್ ವಾಂಟೆಡ್ ಉಗ್ರರಲ್ಲಿ ಒಬ್ಬ.