ಕನ್ನಡ ಚಿತ್ರರಂಗದ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಹಾಗೂ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಅವರ ಮೇಲೆ ನಟಿ ರಾಣಿ ಅನೇಕ ಆರೋಪಗಳನ್ನು ಹೊರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ರಾಣಿ, ಹಣಕಾಸಿನ ಅವ್ಯವಹಾರದ ಜೊತೆ ಮಹಿಳೆಯರಿಗೆ ಸಂಘದಲ್ಲಿರುವವರು ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದರು ಎಂದು ಗುರುತರ ಆರೋಪ ಮಾಡಿದ್ದು, ಪೋಷಕ ಕಲಾವಿದರ ಸಂಘದ ಮೇಲೆ ಆರೋಪ ಮಾಡುವುದಿಲ್ಲ ಎಂದಿದ್ದಾರೆ.
ಮಹಿಳೆಯರನ್ನು ಅಗೌರವದಿಂದ ಇವರು ನಡೆಸಿಕೊಳ್ಳುತ್ತಾರೆ. ಅದರಲ್ಲೂ ಸಂಘದ ಕಾರ್ಯದರ್ಶಿಗಳೇ ಸಂಘದಲ್ಲಿ ಇರುವಂತಹ ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ.
ಸಂಘದ ಲೆಕ್ಕಾಚಾರ ಅಥವಾ ಯಾವುದೇ ವಿಷಯವನ್ನು ನಾವು ಕೇಳಲು ಹೋದರೆ ನಮಗೆ ನಮಗೆ ಸಂಬಂಧವೇ ಇಲ್ಲ ಎಂಬಂತೆ ಆಗಿದೆ. ನಾನು ಸಂಘದ ಉಪಾಧ್ಯಕ್ಷೆ. ನಾನು ಕೂಡ ಚುನಾವಣೆಯಲ್ಲಿ ಗೆದ್ದ ಮಹಿಳೆ. ನಾನು ಅಲ್ಲಿ ಮೆಂಬರ್ ಆಗಿ 15 ವರ್ಷ ಆಯ್ತು. ಯಾವುದೇ ವಿಷಯವನ್ನೂ ನಮಗೆ ಬಿಟ್ಟುಕೊಡದೇ ಅವರವರೇ ಸೇರಿಕೊಂಡು ಮಾಡುತ್ತಾರೆ. ಇದನ್ನು ನಾವು ಕೇಳಲು ಹೋದರೆ ಬೇರೆ ಭಾಷೆ ಬಳಸುತ್ತಾರೆ. ಇಷ್ಟ ಇದ್ರೆ ಇರಿ, ಇಲ್ಲ ಅಂದ್ರೆ ರಾಜಿನಾಮೆ ಕೊಟ್ಟು ಹೋಗಿ ಎಂದು ಟೇಬಲ್ ತಟ್ಟಿ ಹೇಳುತ್ತಾರೆ ಎಂದು ರಾಣಿ ಆರೋಪಿಸಿದ್ದಾರೆ.
ಸಂಘದ ಕಾರ್ಯದರ್ಶಿ ಬಗ್ಗೆಯೇ ಹೆಚ್ಚು ಮಾತನಾಡಿರುವ ರಾಣಿ, ಮಹಿಳೆಯರಿಗೆ ಅಗೌರವ ತೋರೋ ರೀತಿಯಲ್ಲಿ ಅವರು ಮಾತಾಡಿದ್ದಾರೆ. ಕೆಲವೊಮ್ಮೆ ಅಶ್ಲೀಲ ವಿಡಿಯೋ ಕಳಿಸ್ತಿದ್ರು. ಆ ವಿಚಾರವಾಗಿ ಗಲಾಟೆಯೂ ಆಗಿದೆ. ಸಭೆಯಲ್ಲಿ ದೊಡ್ಡ ಚರ್ಚೆಯಾಗಿ ಸಮಾಧಾನ ಮಾಡಿದರು. ಉಪಾಧ್ಯಕ್ಷೆ ಸ್ಥಾನದಿಂದ ಏಕಾಏಕಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ. ಹೀಗಾಗಿ ನ್ಯಾಯ ಸಿಗಬೇಕು ಅಂತ ಹೋರಾಟ ಮಾಡ್ತಿದ್ದಿನಿ ಎಂದಿದ್ದಾರೆ ರಾಣಿ.
ಇತ್ತ ರಾಣಿ ಅವರ ಆರೋಪಕ್ಕೆ ಅಧ್ಯಕ್ಷ ಡಿಂಗ್ರಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ರಾಣಿ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕ್ತಿವಿ. ಪೋಷಕ ಕಲಾವಿದರ ಸಂಘದ ಹಣ ದುರುಪಯೋಗ ಮಾಡಿಲ್ಲ. ಅವರು ಸಂಘದ ಆವರಣದಲ್ಲಿ ವೈಯಕ್ತಿಕ ಕಾರಣಕ್ಕಾಗಿ ಗಲಾಟೆ ಶುರು ಮಾಡಿದ್ರು. ಹಾಗಾಗಿ ಅವರನ್ನು ಸಂಘದಿಂದ ಉಚ್ಚಾಟನೆ ಮಾಡಿದ್ದೇವೆ. ಈಗ ನಾವು ಕಾರ್ಯಕ್ರಮ ಮಾಡ್ತಿದ್ದಿವಿ. ಅದನ್ನು ವಿರೋಧಿಸೋಕೆ ಈ ರೀತಿ ಆರೋಪ ಮಾಡಿದ್ದಾರೆ. ಅಶ್ಲೀಲ ವಿಡಿಯೋ ಕಳಿಸಿರೋದು ಸುಳ್ಳು ಮಾಹಿತಿ. ನಾವೇ ರಾಣಿ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತೀವಿ ಎಂದಿದ್ದಾರೆ ಡಿಂಗ್ರಿ ನಾಗರಾಜ್.










