ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣ ; 38 ಮಂದಿಗೆ ಮರಣದಂಡನೆ…

81
firstsuddi

ಅಹಮದಾಬಾದ್ : ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 49 ಅಪರಾಧಿಗಳಲ್ಲಿ 38 ಮಂದಿಗೆ ಅಹಮದಾಬಾದ್ ನ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿ ಆದೇಶ ನೀಡಿದೆ.

ಈ ಪ್ರಕರಣದಲ್ಲಿ ಇನ್ನುಳಿದ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಭಾರತೀಯ ನೀತಿ ಸಂಹಿತೆ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯ ಪ್ರತಿ ಸೆಕ್ಷನ್ ಅಡಿಯಲ್ಲಿ ಅಪರಾಧಿಗಳಿಗೆ ಶಿಕ್ಷೆ ಘೋಷಿಸಲಾಗಿದೆ. ಅಪರಾಧಿಗಳು ಅಹಮದಾಬಾದ್, ಭೋಪಾಲ್, ಗಯಾ, ಬೆಂಗಳೂರು ಮತ್ತು ದೇಶದ ಇತರ ಭಾಗಗಳಲ್ಲಿನ ಜೈಲುಗಳಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.

ಜುಲೈ 26, 2008ರಂದು 70 ನಿಮಿಷಗಳ ಅವಧಿಯಲ್ಲಿ ಅಹಮದಾಬಾದ್ ನ ವಿವಿಧ ಪ್ರದೇಶಗಳಲ್ಲಿ 20 ಬಾಂಬ್ ಸ್ಫೋಟ ನಡೆದಿತ್ತು. ಅದರಲ್ಲಿ 56 ಜನರು ಮೃತರಾಗಿದ್ದರೆ, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 2002ರ ಗೋಧ್ರಾ ಗಲಭೆಗೆ ಪ್ರತೀಕಾರವಾಗಿ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕರು ಈ ಸ್ಫೋಟಗಳನ್ನು ನಡೆಸಿದ್ದಾರೆ ಎಂದು ಪೊಲೀಸರು ತನಿಖೆ ನಡೆಸಿ ತಿಳಿಸಿದ್ದರು.

ಪ್ರಕರಣದ 77 ಆರೋಪಿಗಳ ಪೈಕಿ 28 ಮಂದಿಯನ್ನು ಗುಜರಾತ್  ನ ವಿಶೇಷ ನ್ಯಾಯಾಲಯ ಫೆಬ್ರವರಿ 8 2022ರಂದು ಖುಲಾಸೆಗೊಳಿಸಿತ್ತು. ಉಳಿದ 49 ಜನರನ್ನು ಅಪರಾಧಿಗಳೆಂದು ಘೋಷಿಸಲಾಗಿತ್ತು. ಈಗ 38 ಮಂದಿಗೆ ಮರಣದಂಡನೆ ಶಿಕ್ಷೆ ಘೋಷಿಸಲಾಗಿದೆ.