ಅ.8ರಂದು ನಡೆಯಲಿರುವ ನಾಲ್ಕನೇ ಜಿಲ್ಲಾ ಜಾನಪದ ಸಮ್ಮೇಳನ- ಸಮ್ಮೇಳನಾಧ್ಯಕ್ಷರಾಗಿ ಬೆಳವಾಡಿಯ ಬಿ.ಪಿ. ಪರಮೇಶ್ವರಪ್ಪ ಆಯ್ಕೆ…

166
firstsuddi

ಚಿಕ್ಕಮಗಳೂರು: ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಅ.8 ರಂದು ನಗರದಲ್ಲಿ ನಾಲ್ಕನೇ ಜಿಲ್ಲಾ ಜಾನಪದ ಸಮ್ಮೇಳನ ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಜಿಲ್ಲೆಯ ಹಿರಿಯ ಭಜನಾ ಕಲಾವಿದ ಬೆಳವಾಡಿಯ ಬಿ.ಪಿ. ಪರಮೇಶ್ವರಪ್ಪ ಆಯ್ಕೆಯಾಗಿದ್ದಾರೆ.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಸಭಾಂಗಣದಲ್ಲಿ ನಿನ್ನೆ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.

ಶ್ರೀ ಬೋಳರಾಮೇಶ್ವರ ದೇವಾಲಯದಿಂದ ವಿವಿಧ ಜಾನಪದ ಕಲಾತಂಡಗಳ ನಡುವೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಲು ಸಭೆ ತೀರ್ಮಾನಿಸಿತು.

ಜಿಲ್ಲೆಯ ಹಿರಿಯ ಜಾನಪದ ಕಲಾವಿದರಿಗೆ ಜಾನಪದ ಸಿರಿ ಪ್ರಶಸ್ತಿ ನೀಡುವುದರ ಜೊತೆಗೆ ಎಲ್ಲಾ ತಾಲೂಕುಗಳ ಜಾನಪದ ಕಲಾವಿದರನ್ನು ಸನ್ಮಾನಿಸಲು ನಿರ್ಧರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲಾ ಶಾಸಕರನ್ನು ರಾಜ್ಯದ ಹಿರಿಯ ಜಾನಪದ ಕಲಾವಿದರನ್ನು ಸಮ್ಮೇಳನಕ್ಕೆ ಆಹ್ವಾನಿಸಲು ತೀರ್ಮಾನಿಸಲಾಯಿತು.

ಉತ್ತರ ಕರ್ನಾಟಕದ ಜಾನಪದ ಕಲಾವಿದರಿಂದ ಸಮ್ಮೇಳನದಲ್ಲಿ ನೃತ್ಯ ಕಾರ್ಯಕ್ರಮ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜಾನಪದ ಗೀತೆಗಳ ಗಾಯನ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಲು ತೀರ್ಮಾನಿಸಲಾಯಿತು. ಹಾಗೂ ಸಮ್ಮೇಳನದಲ್ಲಿ ರಾಜ್ಯದ ಹಿರಿಯ ಜಾನಪದ ಸಾಹಿತಿಗಳಿಂದ ವಿವಿಧ ಗೋಷ್ಠಿಗಳನ್ನು ನಡೆಸಲು ನಿರ್ಧರಿಸಲಾಯಿತು.

ಜಿಲ್ಲೆಯ ಎಲ್ಲಾ ತಾಲೂಕುಗಳ ಕಲಾವಿದರಿಗೆ ಸಮ್ಮೇಳನದಲ್ಲಿ ಜಾನಪದ ಕಾರ್ಯಕ್ರಮ ನಡೆಸಲು ವೇದಿಕೆ ಕಲ್ಪಿಸಲು ಸಮ್ಮೇಳನದಲ್ಲಿ ಜಾನಪದ ಪರಿಕರಗಳ ಮತ್ತು ದೇಶೀಯ ಗೋತಳಿಗಳ ಪ್ರದರ್ಶನ ನಡೆಸಲು ನಿರ್ಧರಿಸಲಾಯಿತು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ ಡಾ.ಜೆ.ಪಿ. ಕೃಷ್ಣೇಗೌಡ, ಸಮ್ಮೇಳನವನ್ನು ನಡೆಸುವುದರಿಂದ ಚಿಕ್ಕಮಗಳೂರಿನ ಕೀರ್ತಿ ಮತ್ತಷ್ಟು ಹೆಚ್ಚುತ್ತದೆ. ಇಂದಿನ ಯುವ ಜನತೆಗೆ ಜಾನಪದವನ್ನು ಪರಿಚಯಿಸುವುದರ ಜೊತೆಗೆ ಅವರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ ಎಂದರು.

ಸಮ್ಮೇಳನದ ಯಶಸ್ಸಿಗೆ ಎಲ್ಲರೂ ದುಡಿಯಬೇಕು ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಮಾತನಾಡಿ ಆಧುನಿಕತೆಯ ಅಬ್ಬರದಲ್ಲಿ ಹೇಳ ಹೆಸರಿಲ್ಲದಂತಾಗುತ್ತಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಈ ಸಮ್ಮೇಳನವನ್ನು ನಡೆಸಲಾಗುತ್ತಿದೆ ಎಂದ ಅವರು, ಸಮ್ಮೇಳನದ ಯಶಸ್ಸಿಗೆ ಎಲ್ಲರೂ ತಮ್ಮೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಹಿರಿಯ ವೀರಗಾಸೆ ಕಲಾವಿದ ಡಾ. ಮಾಳೇನಹಳ್ಳಿ ಬಸಪ್ಪ, ದಾನಿ ಅತ್ತಿಕಟ್ಟೆ ಗುರುನಾಥಗೌಡ ಮಾತನಾಡಿದರು. ಕರ್ನಾಟಕ ಜಾನಪದ ಪರಿಷತ್ತಿನ ವಿವಿಧ ತಾಲೂಕುಗಳ ಪದಾಧಿಕಾರಿಗಳಾದ ಜ್ಯೋತಿ ವಿನೀತ್‍ಕುಮಾರ್, ಜಗದೀಶ್ವರಾಚಾರ್, ಕೌಸ್ತುಭಾಭಟ್, ತಮನ್ನಾ, ಸುಮಾ, ಬೆಳವಾಡಿ ಪರಮೇಶ್, ಬೆಳವಾಡಿ ಗ್ರಾ.ಪಂ. ಅಧ್ಯಕ್ಷೆ ಭಾಗ್ಯ, ಬಕ್ಕೀ ರವಿ, ಚಿಕ್ಕನಲ್ಲೂರು ಜಯಣ್ಣ, ಕಾಲೇಜನ ಪ್ರಾಂಶುಪಾಲ ಜಿ.ಬಿ. ವಿರೂಪಾಕ್ಷ, ಜಿ.ಪಂ. ಮಾಜಿ ಸದಸ್ಯ ಹಿರಿಗಯ್ಯ, ಯಗಟಿ ಪರಮೇಶ್ವರಪ್ಪ, ಹರಿಣಾಕ್ಷಿ ಸಭೆಯಲ್ಲಿ ಪಾಲ್ಗೊಂಡಿದ್ದರು.