ಬೆಂಗಳೂರು : ಕೋವಿಡ್ ಭೀತಿ ಹಿನ್ನಲೆ 2020 – 2021ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನೇ ರದ್ದು ಮಾಡಲಾಗಿತ್ತು. ಬದಲಿಗೆ 10 ಮತ್ತು ಪ್ರಥಮ ಪಿಯುಸಿ ಅಂಕಗಳನ್ನ ಆಧಾರಿಸಿ ಅವರಿಗೆ ಫಲಿತಾಂಶ ಪ್ರಕಟಿಸಲಾಯ್ತು. ಆದರೆ ಫಲಿತಾಂಶವನ್ನ ತಿರಸ್ಕರಿಸಿದವರಿಗೆ ಹಾಗೂ ಖಾಸಗಿ ವಿದ್ಯಾರ್ಥಿಗಳಿಗೆ ಇದೇ ಆಗಸ್ಟ್ 19 ರಿಂದ ಸೆಪ್ಟೆಂಬರ್ 3 ತನಕ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಈಗಾಗಲೇ ಪಿಯು ಬೋರ್ಡ್ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯದಲ್ಲಿ ಒಟ್ಟಾರೆ 18,414 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಅದರಲ್ಲಿ 17,469 ಖಾಸಗಿ ವಿದ್ಯಾರ್ಥಿಗಳು, 352 ಪುನರಾವರ್ತಿತ ಹಾಗೂ 593 ಫ್ರೆಶರ್ಸ್ ಪರೀಕ್ಷೆ ಬರೆಯಲಿದ್ದಾರೆ. ಇನ್ನು ಮಹಾರಾಷ್ಟ್ರ- ಕೇರಳದ ಭಾಗದಿಂದ ಬರುವವರಿಗೆ ಆರ್ ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ 72 ಗಂಟೆಗಳ ನೆಗೆಟಿವ್ ರಿಪೋರ್ಟ್ ತರಬೇಕಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೂ ಕೊರೊನಾ ತಗುಲಿದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದು, ಹತ್ತಿರದ ಕೋವಿಡ್ ಕೇರ್ ಸೆಂಟರ್ ನಲ್ಲಿ ಪರೀಕ್ಷೆ ಬರೆಸಲು ತಯಾರಿ ನಡೆಸಲಾಗುತ್ತೆ. ಇನ್ನು ಪ್ರತಿ ಪರೀಕ್ಷಾ ಕೇಂದ್ರದಲ್ಲೂ ವಿಶೇಷ ಕೊಠಡಿ ಇರಲಿದೆ. ಪರೀಕ್ಷಾ ಕೇಂದ್ರಕ್ಕೆ ಬರುವ ಪ್ರತಿ ವಿದ್ಯಾರ್ಥಿಗೂ ಟೆಂಪರೇಚರ್ ಚೆಕ್ ಮಾಡಿ, ಕೋವಿಡ್ ನಿಯಮ ಪಾಲಿಸುವಂತೆ ಸೂಚಿಸಲಾಗುತ್ತೆ.










