ಜಾನಪದ, ಭಾರತೀಯ ಸಂಸ್ಕೃತಿಯ ತಾಯಿ ಬೇರು, ಅದು ಉಳಿದರೆ ಮಾತ್ರ ನಮ್ಮತನ ಉಳಿಯುತ್ತದೆ: ಎಚ್.ಡಿ.ತಮ್ಮಯ್ಯ.

80
firstsuddi

ಚಿಕ್ಕಮಗಳೂರು: ಆಧುನಿಕತೆಯಿಂದಾಗಿ ಅಳಿವಿನಂಚಿನಲ್ಲಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿದು ಬೆಳೆಯಬೇಕಾದರೆ ಜಾನಪದ ಸಮ್ಮೇಳನಗಳನ್ನು ಎಲ್ಲೆಡೆ ನಿರಂತರವಾಗಿ ನಡೆಸಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದಿಂದ ಅ.20ರಂದು ನಡೆಯಲಿರುವ ನಾಲ್ಕನೇ ಜಿಲ್ಲಾ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಿನ್ನೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜಾನಪದ ಭಾರತೀಯ ಸಂಸ್ಕೃತಿಯ ತಾಯಿ ಬೇರು, ಅದು ಉಳಿದರೆ ಮಾತ್ರ ನಮ್ಮತನ ಉಳಿಯುತ್ತದೆ. ಹಾಗಾಗಿ ಎಲ್ಲರೂ ಜಾನಪದವನ್ನು ಜತನದಿಂದ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ನಗರದಲ್ಲಿ ನಡೆಯಲಿರುವ ಜಾನಪದ ಸಮ್ಮೇಳನಕ್ಕೆ ಸಚಿವರನ್ನು ಕರೆತರಲಾಗುವುದು, ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಅದ್ದೂರಿಯಾಗಿ ನಡೆಸಲಿರುವ ಜಾನಪದ ಸಮ್ಮೇಳನದ ಯಶಸ್ವಿಗೆ ಎಲ್ಲರೂ ತಮ್ಮೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಹಿರಿಯ ವೀರಗಾಸೆ ಕಲಾವಿದ ಡಾ.ಮಾಳೇನಹಳ್ಳಿ ಬಸಪ್ಪ ಮಾತನಾಡಿ, ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಯಬೇಕಾದರೆ ಅವುಗಳನ್ನು ಪಠ್ಯಪುಸ್ತಕಕ್ಕೆ ಅಳವಡಿಸಬೇಕು ಎಂದು ಹೇಳಿದರು.

ಸಮ್ಮೇಳನ ಅಧ್ಯಕ್ಷ ಹಿರಿಯ ಭಜನಾ ಕಲಾವಿದ ಬಿ.ಪಿ.ಪರಮೇಶ್ವರಪ್ಪ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಬಿಳಲಿ ನಾಗರಾಜ್, ಕಡೂರು ತಾಲೂಕು ಗೌರವಾಧ್ಯಕ್ಷ ಚಿಕ್ಕನಲ್ಲೂರು ಜಯಣ್ಣ, ಸಂಘಟನಾ ಕಾರ್ಯದರ್ಶಿ ಜಿ.ಬಿ. ವಿರೂಪಾಕ್ಷ, ಜಿ.ಪಂ. ಮಾಜಿ ಸದಸ್ಯ ಹಿರಿಗಯ್ಯ ಕುಂಕನಾಡು, ನಾಗರಾಜ್, ಚಂದ್ರೇಗೌಡ, ಬೆಳವಾಡಿ ಪ್ರಕಾಶ್, ಸಂದೀಪ್, ಸಂಗೀತ ಶಿಕ್ಷಕಿ ಶಶಿಕಲಾ, ಶಿವಶಂಕರ್, ಮರುಳ ಸಿದ್ದಪ್ಪ ಹಾಜರಿದ್ದರು.