ಚೆನ್ನೈ : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ವಿರಾಟ್ ಕೊಹ್ಲಿ ಬಗ್ಗೆ ಅಪಹಾಸ್ಯ ಮಾಡಿದ್ದಕ್ಕೆ ಯುವಕನೋರ್ವ ತನ್ನ ಸ್ನೇಹಿತನನ್ನೇ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಅರಿಯಲೂರಿನ ಪೊಯ್ಯೂರ್ ನಲ್ಲಿ ವರದಿಯಾಗಿದೆ.
ವಿಘ್ನೇಶ್(24) ಕೊಲೆಯಾದ ವ್ಯಕ್ತಿ ಹಾಗೂ ಧರ್ಮರಾಜ್ (21) ಕೊಲೆ ಆರೋಪಿ. ವಿಘ್ನೇಶ್ ಮತ್ತು ಧರ್ಮರಾಜ್ ಮಲ್ಲೂರು ಬಳಿಯ ಸಿಡ್ಕೊ ಇಂಡಸ್ಟ್ರಿಯಲ್ ಎಸ್ಟೇಟ್ ಗೆ ಹೋಗಿದ್ದರು. ಈ ವೇಳೆ ಇಬ್ಬರು ಮದ್ಯ ಸೇವಿಸಿ ಪಾರ್ಟಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂನಲ್ಲಿ ಯಾವುದು ಉತ್ತಮ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದರು.
ಆರ್‌ಸಿಬಿ ಮತ್ತು ವಿರಾಟ್ ಕೊಹ್ಲಿ ಬಗ್ಗೆ ವಿಘ್ನೇಶ್ ಅಪಹಾಸ್ಯ ಮಾಡಿದ್ದನು. ಇದರಿಂದ ಕುಪಿತಗೊಂಡ ಧರ್ಮರಾಜ್, ವಿಘ್ನೇಶ್ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ಜೊತೆಗೆ ಬ್ಯಾಟ್ ನಿಂದ ತಲೆಗೆ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೊಬೈಲ್ ದಾಖಲೆಯ ಆಧಾರದ ಮೇಲೆ ಧರ್ಮರಾಜ್ ನನ್ನು ಬಂಧಿಸಿದ್ದಾರೆ. ಐಟಿಐ ಮುಗಿಸಿದ್ದ ವಿಘ್ನೇಶ್ ಸಿಂಗಪುರಕ್ಕೆ ತೆರಳಲು ಉದ್ಯೋಗ ವೀಸಾಗಾಗಿ ಕಾಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.










