ಮೈಸೂರು : ಕೊರೊನಾ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಆಷಾಢ ಮಾಸದ ಶುಕ್ರವಾರದಂದು ಜಿಲ್ಲೆಯ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆಗಸ್ಟ್ ನಿಂದ ಆಷಾಢ ಮಾಸ ಪ್ರಾರಂಭವಾಗಲಿದ್ದು, ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ರಾಜ್ಯಾದ್ಯಂತ ಸಾವಿರಾರು ಭಕ್ತರು ಆಗಮಿಸುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರೆ ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ಅವರು ಈ ಆದೇಶ ಮಾಡಿದ್ದಾರೆ. ನಾಲ್ಕು ಆಷಾಢ ಶುಕ್ರವಾರ ಹಾಗೂ ಎರಡು ಅಮಾವಾಸ್ಯೆ ದಿನ ನಿರ್ಬಂಧ ಹಾಕಲಾಗಿದೆ.
ಜುಲೈ-9 ಆಷಾಢ ಅಮವಾಸ್ಯೆ, ಜುಲೈ-16 ಮೊದಲನೇ ಆಷಾಢ ಶುಕ್ರವಾರ, ಜುಲೈ-23 ಎರಡನೇ ಆಷಾಢ ಶುಕ್ರವಾರ, ಅಮ್ಮನವರ ವರ್ಧಂತಿ, ಜುಲೈ-30 ಮೂರನೇ ಆಷಾಢ ಶುಕ್ರವಾರ, ಆಗಸ್ಟ್- 6 ನಾಲ್ಕನೇ ಆಷಾಢ ಶುಕ್ರವಾರ, ಆಗಸ್ಟ್-8 ಭೀಮನ ಅಮವಾಸ್ಯೆ ದಿನ ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆಷಾಢ ಮಾಸದ ಶನಿವಾರ, ಭಾನುವಾರ ಮತ್ತು ಸರ್ಕಾರಿ ಸಾರ್ವತ್ರಿಕ ರಜಾ ದಿನಗಳಂದು ನಿರ್ಬಂಧ ಇದ್ದು, ಇಂದಿನಿಂದ ಪ್ರತಿದಿನ ಸಂಜೆ 6 ಗಂಟೆಯ ನಂತರವೂ ಭಕ್ತರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.










