ಆಸ್ತಿಗಾಗಿ ಸುಪಾರಿ ಕೊಟ್ಟು ಅಪ್ಪನನ್ನೇ ಕೊಲೆ ಮಾಡಿಸಿದ ಮಗ…

40
firstsuddi

ಬಾಗಲಕೋಟೆ: ಆಸ್ತಿಗಾಗಿ ವ್ಯಕ್ತಿಯೊಬ್ಬ ತನ್ನ ತಂದೆಯನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಚೆನ್ನಪ್ಪ (66) ಕೊಲೆಯಾದ ತಂದೆ. ವಿಕಲಚೇತನನಾಗಿರುವ ಮಗ ಚೆನ್ನಬಸಪ್ಪ ವಿಜಯಪುರ ಜಿಲ್ಲೆ ನಿಡಗುಂದಿ ಮೂಲದ ಮಾಂತೇಶ್‍ಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ.

ಚೆನ್ನಪ್ಪನ ಕುಟುಂಬ ಬಾಗಲಕೋಟೆ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ವಾಸಿಸುತ್ತಿತ್ತು. 32 ಎಕರೆ ಜಮೀನನ್ನು ಭಾಗ ಮಾಡುವ ವಿಚಾರಕ್ಕೆ ತಂದೆ ಮತ್ತು ಮಗನ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಹೀಗಾಗಿ ಚನ್ನಬಸಪ್ಪ, ಪತ್ನಿ ಶಿವಬಸವ್ವ ಮತ್ತು ಚನ್ನಬಸಪ್ಪನ ಆಪ್ತ ರಮೇಶ್ ಮನಗೂಳಿ ಒಟ್ಟಿಗೆ ಸೇರಿ ಕೊಲೆ ಮಾಡಲು ಯೋಚನೆ ರೂಪಿಸಿದ್ದರು. ಬಳಿಕ ಮಾಂತೇಶ್ ಮರಡಿಮಠ ಎಂಬಾತನಿಗೆ 3 ಲಕ್ಷ ರೂ. ನೀಡಿ ಚೆನ್ನಪ್ಪನನ್ನು ಕೊಲೆ ಮಾಡುವಂತೆ ಸುಫಾರಿ ನೀಡಿದ್ದಾರೆ. ಅಂತೆಯೇ ಚೆನ್ನಪ್ಪನನ್ನು ರಾಂಪುರ ಗ್ರಾಮದ ಬಳಿ ಮಚ್ಚಿನಿಂದ ಕೊಚ್ಚಿ ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಲಾಗಿದೆ.

ವಿಚಾರ ತಿಳಿದು ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ತನಿಖೆ ನಡೆಸಿ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಪ್ರಕರಣದ ಆರೋಪಿಗಳಾದ ಮಗ ಚನ್ನಬಸಪ್ಪ, ಸೊಸೆ ಶಿವಬಸವ್ವ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.