ಆಸ್ತಿ ವಿವಾದ: ಕಿತ್ತಾಟದಲ್ಲಿ ಎಂಟು ಬಾರಿ ಟ್ರಾಕ್ಟರ್ ಹರಿಸಿ ಓರ್ವನ ಕೊಲೆ…

67
firstsuddi

ಭರತ್‍ಪುರ: ಆಸ್ತಿಗಾಗಿ ಎರಡು ಕುಟುಂಬಗಳ ನಡುವೆ ನಡೆದ ಕಿತ್ತಾಟ ತಾರಕಕ್ಕೇರಿ ಟ್ರ್ಯಾಕ್ಟರ್ ಹತ್ತಿಸಿ ಓರ್ವನನ್ನು ಕೊಲೆ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಆರೋಪಿಗಳು ಆ ವ್ಯಕ್ತಿಯ ಮೇಲೆ ಎಂಟು ಬಾರಿ ಟ್ರಾಕ್ಟರ್ ಹರಿಸಿದ್ದಾರೆ, ಆತ ಸಾಯುವವರೆಗೂ ಟ್ರ್ಯಾಕ್ಟರ್​ನ್ನು ಮೈಮೇಲೆ ಹತ್ತಿಸುತ್ತಲೇ ಇದ್ದರು. ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

ಭರತ್‍ಪುರ ಜಿಲ್ಲೆಯ ಬಯಾನ್ ಪ್ರದೇಶದ ಅಡ್ಡಾ ಗ್ರಾಮದಲ್ಲಿ ಇಂದು ಬೆಳಗ್ಗೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಬಹದ್ದೂರ್ ಸಿಂಗ್ ಮತ್ತು ಅತಾರ್ ಸಿಂಗ್ ಗುರ್ಜರ್ ಅವರ ಕುಟುಂಬಗಳ ನಡುವೆ ಕಿತ್ತಾಟ ನಡೆದಿದೆ. ಘಟನೆಯಲ್ಲಿ ಎರಡೂ ಕುಟುಂಬಗಳು ಸೇರಿದಂತೆ ಹಲವರು ಜಮಾಯಿಸಿದ್ದರು. ಬಹದ್ದೂರ್ ಸಿಂಗ್ ಅವರ ಕುಟುಂಬವು ವಿವಾದಿತ ಪ್ಲಾಟ್‌ಗೆ ಟ್ರ್ಯಾಕ್ಟರ್‌ನಲ್ಲಿ ತಲುಪಿದೆ. ಸ್ವಲ್ಪ ಸಮಯದ ನಂತರ ಗುರ್ಜರ್ ಕುಟುಂಬ ಕೂಡ ಅಲ್ಲಿಗೆ ಬಂದಿತ್ತು.

ಕೂಡಲೇ ಎರಡು ಕುಟುಂಬಗಳು ಘರ್ಷಣೆಗಿಳಿದು ಪರಸ್ಪರ ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಘರ್ಷಣೆಯ ಸಮಯದಲ್ಲಿ, ಅತಾರ್ ಸಿಂಗ್ ಅವರ ಮಗ ನಿರ್ಪತ್ ನೆಲಕ್ಕೆ ಬಿದ್ದಿದ್ದಾರೆ, ಈ ವೇಳೆ ಕೋಪೋದ್ರಿಕ್ತ ಬಹದ್ದೂರ್ ಸಿಂಗ್ ಅವರ ಕುಟುಂಬದವರು ಆತನ ಮೇಲೆ ಎಂಟು ಬಾರಿ ಟ್ರ್ಯಾಕ್ಟರ್ ಹರಿಸಿದ್ದಾರೆ. ಇತರರು ಮಧ್ಯಪ್ರವೇಶಿಸಿದರೂ ಟ್ರ್ಯಾಕ್ಟರ್ ಮೇಲಿದ್ದ ಆಪಾದಿತ ವ್ಯಕ್ತಿ ಪದೇ ಪದೇ ವಾಹನ ಹತ್ತಿಸಿ ಕೊಲೆ ಮಾಡಿದ್ದಾನೆ. ಈ ಭೀಕರ ದೃಶ್ಯವನ್ನು ಅಲ್ಲಿದ್ದವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

ಘಟನೆಯ ಬಳಿಕ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣ ದಾಖಲಿಸಿಕೊಂಡು ಕೆಲವರನ್ನು ವಶಕ್ಕೆ ಪಡೆದಿದ್ದಾರೆ.