ಇಂದಿನಿಂದ ದೇಶದಲ್ಲಿ 5ಜಿ ಸೇವೆ ಆರಂಭ – ಪ್ರಧಾನಿ ಮೋದಿಯಿಂದ ಚಾಲನೆ…

66
firstsuddi

ನವದೆಹಲಿ: ಬಹು ನಿರೀಕ್ಷಿತ 5ಜಿ ಇಂಟರ್ ನೆಟ್ ಸೇವೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ದೆಹಲಿಯ ಪ್ರಗತಿ ಮೈದಾನದಲ್ಲಿ 6 ನೇ ಇಂಡಿಯಾ ಮೊಬೈಲ್ ಕಾಂಗ್ರೆಸ್ ನ್ನು ಉದ್ಘಾಟಿಸಿ 5ಜಿ ಸೇವೆಗಳಿಗೆ ಚಾಲನೆ ನೀಡಿದರು. ಈ ಮೂಲಕ ಇಂದಿನಿಂದ ಭಾರತವು ಇಂಟರ್ನೆಟ್ ನ 5ಜಿ ಯುಗವನ್ನು ಪ್ರವೇಶಿಸಲಿದೆ.

ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, ಇನ್ನು ಮುಂದೆ ಟೆಲಿಕಾಂ ಕಂಪನಿಗಳಿಂದ ದೇಶದ ಜನರಿಗೆ 5 ಜಿ ಸೇವೆ ಸಿಗಲಿದೆ. ಇದು ದೂರಸಂಪರ್ಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲಿದೆ. ಈ ಸಾಧನೆಗೆ ನಾನು ಎಲ್ಲರನ್ನೂ ಅಭಿನಂದಿಸುವೆ ಎಂದು ಹೇಳಿದರು.

ಏನಿದು 5ಜಿ ಇಂಟರ್ ನೆಟ್: 5ಜಿ ಎಂಬುದು 5ನೇ ಪೀಳಿಗೆಯ ಮೊಬೈಲ್ ನೆಟ್ ವರ್ಕ್ ಆಗಿದೆ. 4 ಜಿಗಿಂತಲೂ 20 ಪಟ್ಟು ಹೆಚ್ಚು ವೇಗದ ಇಂಟರ್ ನೆಟ್ ಇದು ಒದಗಿಸುತ್ತದೆ. ಈ ಸುಧಾರಿತ ನೆಟ್ ವರ್ಕ್ ಬಳಕೆದಾರರಿಗೆ ವಿಳಂಬ ಮುಕ್ತ ಸಂಪರ್ಕವನ್ನು ನೀಡುತ್ತದೆ.

ಯಾವೆಲ್ಲ ನಗರದಲ್ಲಿ 5ಜಿ?:
ದೇಶದ ಒಟ್ಟು 12 ನಗರಗಳಾದ ದೆಹಲಿ, ಬೆಂಗಳೂರು, ಅಹಮದಾಬಾದ್, ಚಂಡೀಗಢ, ಚೆನ್ನೈ, ಕೋಲ್ಕತ್ತಾ, ಪುಣೆ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮನಗರ, ಲಕ್ನೋದಲ್ಲಿ ಸೇವೆ ಆರಂಭಗೊಂಡಿದೆ.