ಪ್ರಯಾಗ್‍ರಾಜ್: ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ಇಂದಿನಿಂದ ಆರಂಭವಾಗಲಿರುವ ಮಹಾಕುಂಭ ಮೇಳ- 2025ಕ್ಕೆ ಭರದಿಂದ ಸಿದ್ಧತೆ ನಡೆದಿವೆ. ರೈಲ್ವೆ ಇಲಾಖೆಯ 1,609 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳೂ ಸೇರಿದಂತೆ ಸುಮಾರು 5,500 ಕೋಟಿ ರೂ. ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಮಹಾಕುಂಭ ಮೇಳದ ಧಾರ್ಮಿಕ ವಿಧಿ ವಿಧಾನಗಳನ್ನೂ ನೆರವೇರಿಸಲಿದ್ದಾರೆ. ಇಂದು ಮಧ್ಯಾಹ್ನ 12.15ರ ಸುಮಾರಿಗೆ ಪ್ರಧಾನಿಗಳು ಆಮಿಸಲಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರೀವೇಣಿ ಸಂಗಮದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಸಾಥ್ ನೀಡಲಿದ್ದಾರೆ. ಅವರು, ಗುರುವಾರ ಪ್ರಯಾಗ್‍ರಾಜ್‍ಗೆ ಭೇಟಿ ನೀಡಿ, ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದ್ದರು. ಪ್ರಯಾಗ್‍ರಾಜ್‍ನಲ್ಲಿ 12 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಈ ಬಾರಿ ಅದು 2025ರ ಜನವರಿ 13ರಿಂದ ಫೆಬ್ರುವರಿ 26ರ ವರೆಗೆ ಜರುಗಲಿದೆ. 50 ದಿನಗಳವರೆಗೆ ನಡೆಯುವ ಈ ಮಹಾ ಧಾರ್ಮಿಕ ಮಹೋತ್ಸವದಲ್ಲಿ ಸುಮಾರು 15 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದೆ. ಈ ಸಂಬಂಧ ರೈಲ್ವೆ ಇಲಾಖೆಯೂ ಪ್ರಯಾಣಿಕರ ಅನುಕೂಲಕ್ಕಾಗಿ ಒಟ್ಟು 13,000 ರೈಲುಗಳ ಸಂಚಾರ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಮಹಾ ಕುಂಭಮೇಳದ ಅವಧಿಯಲ್ಲಿ ರೈಲ್ವೆ ಇಲಾಖೆಯು 10,000 ದೈನಂದಿನ ರೈಲುಗಳ ಜತೆಗೆ ಹೆಚ್ಚುವರಿಯಾಗಿ 3,000 ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ ಎಂದು ಉತ್ತರ ಮಧ್ಯ ರೈಲ್ವೆಯ ಮುಖ್ಯ ಜನ ಸಂಪರ್ಕ ಅಧಿಕಾರಿ ಶಶಿಕಾಂತ ತ್ರಿಪಾಠಿ ತಿಳಿಸಿದ್ದಾರೆ.