ನಟ ಪುನೀತ್‍ಗೆ ಇಂದು ‘ಕರ್ನಾಟಕ ರತ್ನ’ ಪ್ರದಾನ…

73
firstsuddi

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರಿಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದ್ದು, ವಿಧಾನಸೌಧದ ಮೆಟ್ಟಿಲುಗಳ ಕಾರ್ಯಕ್ರಮ ನಡೆಯಲಿದೆ. ಪುನೀತ್ ಪತ್ನಿ ಅಶ್ವಿನಿ ಅವರು ಪ್ರಶಸ್ತಿಯನ್ನ ಸ್ವೀಕರಿಸಲಿದ್ದು, ಸಂಜೆ 4 ಗಂಟೆಗೆ ಸಮಾರಂಭ ನಡೆಯಲಿದೆ.

ಸುಮಾರು 25 ಸಾವಿರ ಮಂದಿ ಭಾಗವಹಿಸುವ ಸಾಧ್ಯತೆ ಇದ್ದು, ಗಣ್ಯರಿಗೆ 5 ಸಾವಿರ ಪಾಸ್ ಗಳನ್ನು ವಿತರಿಸಲಾಗಿದೆ. ಇನ್ನು ಡಾ.ರಾಜ್ ಕುಟುಂಬಕ್ಕೂ ರಾಜ್ಯ ಸರ್ಕಾರ ಆಹ್ವಾನ ನೀಡಿದ್ದು, ಇಡೀ ಕುಟುಂಬ ಒಟ್ಟಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ. ಡಾ.ರಾಜ್ ಕುಟುಂಬ ಸದಸ್ಯರು ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು ಭಾಗಿಯಾಗಲಿದ್ದಾರೆ. ಅಪ್ಪುಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಮುಖ್ಯ ಅತಿಥಿಯಾಗಿ ಖ್ಯಾತ ನಟರಾದ ಸೂಪರ್ ಸ್ಟಾರ್ ರಜನಿಕಾಂತ್, ಜ್ಯೂ.ಎನ್ಟಿಆರ್, ಇನ್ಫೋಸಿಸ್ ಸುಧಾಮೂರ್ತಿ ಭಾಗಿಯಾಗಲಿದ್ದಾರೆ.

ವಿಧಾನಸೌಧದ ಪೂರ್ವದ್ವಾರದ ಗ್ರ್ಯಾಂಡ್ ಸ್ಟೆಪ್ ಮೇಲೆ ಹಂಪಿ ಮಾದರಿಯ ಬೃಹತ್ ಮಂಟಪ ನಿರ್ಮಾಣ ಮಾಡಲಾಗಿದೆ. ಅದ್ದೂರಿ ವೇದಿಕೆ ಸಿದ್ಧಗೊಂಡಿದೆ. ವೇದಿಕೆ ಮೇಲೆ 30 ವಿವಿಐಪಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಿಐಪಿಗಳಿಗೆ ಗ್ರ್ಯಾಂಡ್ ಸ್ಟೆಪ್ ವೇದಿಕೆಯ ಮುಂಭಾಗದಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸುಮಾರು 7000 ವಿಐಪಿ ಪಾಸ್ ಗಳ ವಿತರಣೆ ಮಾಡಲಾಗಿದ್ದು, ಆಸನಗಳನ್ನ ಹಾಕಲಾಗಿದೆ. ಇನ್ನು ಅಪ್ಪು ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಇನ್ನು ಪೊಲೀಸ್ ಇಲಾಖೆ ಕಾರ್ಯಕ್ರಮದ ಬಂದೋಬಸ್ತ್ಗೆ 1,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿದೆ.

ಇವತ್ತಿನ ಕಾರ್ಯಕ್ರಮಕ್ಕೆ ಸಂಚಾರಿ ಪೊಲೀಸರು ಕೂಡ ಸರ್ವ ಸನ್ನದ್ಧರಾಗಿದ್ದು, ಅಂಬೇಡ್ಕರ್ ರೋಡ್ ಸೇರಿದಂತೆ ಹಲವು ರಸ್ತೆ ಮಾರ್ಗಗಳನ್ನ ಬದಲಿಸಿದ್ದಾರೆ. ಕಾರ್ಯಕ್ರಮಕ್ಕೆ ಬರುವವರಿಗೆ ಕಬ್ಬನ್ ಪಾರ್ಕ್ ನಲ್ಲಿ ವಾಹನ ನಿಲುಗಡೆಗೆ ಅವಕಾಶ ಇರಲಿದೆ.