ಇಂದು ಪಂಜಾಬ್ ಬಂದ್‍ಗೆ ರೈತರ ಕರೆ.

42

ಚಂಡೀಗಢ ಪಂಜಾಬ್: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್ ಮತ್ತು ಹರಿಯಾಣದ ರೈತರು ಶಂಭು ಮತ್ತು ಕನೌರಿ ಗಡಿ ಬಳಿ ನಿರಂತರ ಪ್ರತಿಭಟನೆ ಮಾಡುತ್ತಿದ್ದರೆ. ರೈತರು ನಡೆಸಿದ್ದ ದೆಹಲಿ ನಡಿಗೆ ಹಲವು ಬಾರಿ ವಿಫಲವಾಗಿದ್ದು, ಗಡಿಯಲ್ಲಿಯೇ ಅವರನ್ನು ತಡೆಯಲಾಗುತ್ತದೆ. ಮತ್ತೊಂದು ಕಡೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ನಾಯಕ ಜಗ್ಜೀತ್ ಸಿಂಗ್ ಕಳೆದ 34 ದಿನಗಳಿಂದ ಉಪವಾಸ ಮಾಡುತ್ತಿದ್ದಾರೆ. ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಹಿನ್ನೆಲೆ ಮಧ್ಯ ಪ್ರವೇಶಿಸಿರುವ ಸುಪ್ರೀಂ ಕೋರ್ಟ್ ಪಂಜಾಬ್ ಮತ್ತು ಕೇಂದ್ರ ಸರ್ಕಾರಗಳು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದೆ ಎಂದು ಮಾಹಿತಿ ತಿಳಿದುಬಂದಿದೆ. ಈ ನಡುವೆ ರೈತರು ಇಂದು ಪಂಜಾಬ್ ಬಂದ್‍ಗೆ ಕರೆ ನೀಡಿದ್ದಾರೆ. ತುರ್ತು ಸೇವೆ ಹೊರತುಪಡಿಸಿ ಸಂಪೂರ್ಣ ಬಂದ್ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಇದಾದ ನಂತರ ಹರಿಯಾಣದಲ್ಲಿ ಜ.4 ರಂದು ಮತ್ತು ಜ.9 ರಂದು ಮೊಗಾದಲ್ಲಿ ಮಹಾಪಂಚಾಯತ್ ನಡೆಸಲಾಗುವುದು ಎಂದು ರೈತರು ಘೋಷಿಸಿದ್ದಾರೆ. ಡಿ.30ರಂದು ಕರೆ ನೀಡಿರುವ ಪಂಜಾಬ್ ಬಂದ್ ರಸ್ತೆ ಟ್ರಾಫಿಕ್ ಜೊತೆಗೆ ಉದ್ಯಮದ ಮೇಲೂ ಪರಿಣಾಮ ಬೀರುತ್ತದೆ. ಇದೇ ವೇಳೆ ಪಂಜಾಬ್ ಉದ್ಯಮಿಗಳು ಮಾರುಕಟ್ಟೆ ತೆರೆಯುವುದಾಗಿ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಪಂಜಾಬ್ ಉದ್ಯಮ ಮಂಡಳಿಯ ರಾಜ್ಯ ನಾಯಕ ಅನಿಲ್ ಬನ್ಸಾಲ್ ನಾನಾ, ರೈತ ಸಂಘಟನೆ ಬಂದ್ ಕುರಿತಾಗಿ ನಮ್ಮ ಜೊತೆ ಯಾವುದೇ ಸಂಪರ್ಕ ಮಾಡಿಲ್ಲ. ಜೊತೆಗೆ ಬಂದ್‍ನಿಂದ ಉದ್ಯಮಿ, ವ್ಯಾಪಾರಿಗಳಿಗೆ ತೊಂದರೆಯಾಗುತ್ತದೆ. ಈಗಾಗಲೇ ಉದ್ಯಮವೂ ಕೆಟ್ಟ ಪರಿಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ನಾವು ಪಂಜಾಬ್ ಬಂದ್‍ಗೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ರಾಜ್ಯ ಬಂದ್‍ಗೆ ಪಿಆರ್‌ಟಿಸಿ ಗುತ್ತಿಗೆ ಕಾರ್ಮಿಕರು ಬೆಂಬಲ ನೀಡಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.