ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಬೆಳಗ್ಗೆ 10.10ಕ್ಕೆ ಹೆಚ್ಎಎಲ್ ಏರ್ಪೋರ್ಟ್ಗೆ ಮೋದಿ ಆಗಮಿಸಲಿದ್ದು ಹೆಚ್ಎಎಲ್ನಿಂದ ಹೆಲಿಕಾಪ್ಟರ್ನಲ್ಲಿ ಚಿಕ್ಕಬಳ್ಳಾಪುರಕ್ಕೆ ತೆರಳುತ್ತಾರೆ. ಬೆಳಗ್ಗೆ 10.35ಕ್ಕೆ ಚಿಕ್ಕಬಳ್ಳಾಪುರ ತಲುಪಿ ಬೆಳಗ್ಗೆ 10.45ಕ್ಕೆ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ & ಸಂಶೋಧನಾ ಸಂಸ್ಥೆ ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 12.55ಕ್ಕೆ ವೈಟ್ ಫೀಲ್ಡ್ ಮೆಟ್ರೋ ಸ್ಟೇಷನ್ ಗೆ ಆಗಮಿಸಿ ಮಧ್ಯಾಹ್ನ 1 ಗಂಟೆಗೆ ವೈಟ್ ಫೀಲ್ಡ್ ಮೆಟ್ರೋ ಮಾರ್ಗ ಉದ್ಘಾಟಿಸಲಿದ್ದಾರೆ.
ಉದ್ಘಾಟನೆ ನಂತರ ಮೆಟ್ರೋದಲ್ಲಿ ಪ್ರಯಾಣ ಮಾಡಲಿದ್ದಾರೆ. ಮಧ್ಯಾಹ್ನ 1.50ಕ್ಕೆ ಬೆಂಗಳೂರಿನಿಂದ ಹೆಲಿಕಾಪ್ಟರ್ನಲ್ಲಿ ದಾವಣಗೆರೆಗೆ ತೆರಳಿ ಮಧ್ಯಾಹ್ನ 3.30ಕ್ಕೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಿ ಸಂಜೆ 5.15ಕ್ಕೆ ದಾವಣಗೆರೆಯಿಂದ ಹೆಲಿಕಾಪ್ಟರ್ನಲ್ಲಿ ಶಿವಮೊಗ್ಗಕ್ಕೆ ಪ್ರಯಾಣಿಸಲಿದ್ದಾರೆ. ಬಳಿಕ ಸಂಜೆ 5.55ಕ್ಕೆ ಶಿವಮೊಗ್ಗ ಏರ್ಪೋರ್ಟ್ನಿಂದ ದೆಹಲಿಗೆ ತೆರಳಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯಿಂದ ವೈಟ್ ಫೀಲ್ಡ್ ಮೆಟ್ರೋ ಸ್ಟೇಷನ್ ಲೋಕಾರ್ಪಣೆ ಹಿನ್ನೆಲೆ ಮೆಟ್ರೋ ಸ್ಟೇಷನ್ ಬಳಿ ರಸ್ತೆಗಳು ಸಿಂಗಾರಗೊಂಡಿವೆ. ಕೇಸರಿ ಬಾವುಟಗಳು ರಾರಾಜಿಸುತ್ತಿವೆ. ಮೆಟ್ರೋ ಸ್ಟೇಷನ್ ಸುತ್ತಾಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇನ್ನೂ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬರುವ 8 ಲಕ್ಷಕ್ಕೂ ಅಧಿಕ ಕಾರ್ಯಕರ್ತರಿಗೆ ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗಿದೆ.










