ಇಂದು ಹುಬ್ಬಳ್ಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮನ-ಬಿಗಿ ಪೊಲೀಸ್ ಬಂದೋಬಸ್ತ್…

155
firstsuddi

ಹುಬ್ಬಳ್ಳಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಇಂದು ಆಗಮಿಸುತ್ತಿದ್ದು, ಹುಬ್ಬಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇಂದು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಆಯೋಜಿಸಿರುವ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಭಾಗವಹಿಸಲು ಅಮಿತ್ ಶಾ ಅವರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ಸಚಿವರಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರು ಸೇರಿದಂತೆ ಅನೇಕ ಬಿಜೆಪಿ ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆ ಹುಬ್ಬಳ್ಳಿಯ ನೆಹರೂ ಮೈದಾನ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆಗಾಗಿ 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.