ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಯೂ ನಿಲ್ಲುವ ಅವಶ್ಯಕತೆ ಇಲ್ಲ, QR ಕೋಡ್ ವ್ಯವಸ್ಥೆ ಜಾರಿ : ಸುಧಾಕರ್.

75
firstsuddi

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಚಿಕಿತ್ಸೆಗಾಗಿ ಗಂಟೆಗಟ್ಟಲೆ ಕಾಯುವ ವ್ಯವಸ್ಥೆ ಇರುವುದಿಲ್ಲ. QR ಕೋಡ್ ವ್ಯವಸ್ಥೆ ಜಾರಿ ಮಾಡಿದ್ದೇವೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ನ ಹರೀಶ್ ಕುಮಾರ್, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಗಂಟೆಗಟ್ಟಲೇ ಕಾಯುವ ಸ್ಥಿತಿ ಬಂದಿದೆ. ಸರಿಯಾದ ಮಾಹಿತಿ ಇಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ಈ ವ್ಯವಸ್ಥೆ ಸರಿ ಮಾಡಬೇಕು ಎಂದರು. ಇದಕ್ಕೆ ಉತ್ತರ ನೀಡಿದ ಸಚಿವ ಸುಧಾಕರ್, ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ತುಂಬಾ ಸಮಯ ಕಾಯೋ ಅವಶ್ಯಕತೆ ಇಲ್ಲ. ಈಗ ಹೊಸ ಹೊಸ ವ್ಯವಸ್ಥೆ ಜಾರಿ ಮಾಡಲಾಗಿದೆ. QR ಕೋಡ್ ವ್ಯವಸ್ಥೆ ಜಾರಿ ಮಾಡಿದ್ದೇವೆ. ಸ್ಕಿಪ್ ದ ಕ್ಯೂ ಅಂತ ಕಾರ್ಯಕ್ರಮ ಮಾಡಿದ್ದೇವೆ. ಈ ಆಪ್ ನಲ್ಲಿ ಆಸ್ಪತ್ರೆಯಲ್ಲಿ ಎಷ್ಟು ಜನ ಇದ್ದಾರೆ, ಕ್ಯೂ ಎಷ್ಟು ಅಂತ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಉತ್ತರ ನೀಡಿದರು.

ಇದಲ್ಲದೆ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ತೆರಯಲು ಮುಂದಾಗಿದ್ದು, 19 ಜಿಲ್ಲೆಯಲ್ಲಿ ತೆರೆಯಲಾಗಿದೆ. 24 ಗಂಟೆ 4 ಜನ ಆಸ್ಪತ್ರೆಯಲ್ಲಿ ಮಾಹಿತಿ ಕೊಡುತ್ತಾರೆ. ಆಯುಷ್ಮಾನ್ ಭಾರತ್ ಮತ್ತು ರಾಜ್ಯದ ಹೆಲ್ತ್ ಕಾರ್ಡ್​ನ್ನು ಸೇರಿಸಿ ಒಂದು ಕಾರ್ಡ್ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. 4 ದಿನಗಳಲ್ಲಿ ಈಗಾಗಲೇ 1 ಕೋಟಿ 28 ಲಕ್ಷ ಕಾರ್ಡ್ ಕೊಡಲಾಗಿದೆ. ಒಟ್ಟು 4 ಕೋಟಿ ಕಾರ್ಡ್ ಕೊಡಬೇಕು. ಎಲ್ಲೇ ಹೋದರೂ ಈ ಕಾರ್ಡ್ ತೋರಿಸಿದರೆ ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.