ಇ-ಸ್ವತ್ತು ಮಂಜೂರು ಪ್ರಕ್ರಿಯೆ ಸರಳೀಕರಣಕ್ಕೆ ಕಾರ್ಯಪಡೆ ರಚನೆ : ಸಚಿವ ಪ್ರಿಯಾಂಕ್ ಖರ್ಗೆ.

56

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳ ಇ-ಸ್ವತ್ತು ಮಂಜೂರಾತಿಯನ್ನು ಸರಳೀಕರಣ ಹಾಗೂ ಸಬಲೀಕರಣಗೊಳಿಸುವ ಸಲುವಾಗಿ ಕಂದಾಯ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವ ಸಲುವಾಗಿ ಕಾರ್ಯಪಡೆ ರಚಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ತಿಳಿಸಿದ್ದಾರೆ. ಇ-ಖಾತಾ ಸಂಬಂಧ ಬುಧವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯ ಹಿನ್ನೆಲೆಯಲ್ಲಿ ಇಂದು ಅವರು ವಿಕಾಸಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಗ್ರಾಮೀಣ ವ್ಯಾಪ್ತಿಯ ಹೊರ ಭಾಗದ ಬಹಳಷ್ಟು ಪ್ರದೇಶಗಳಲ್ಲಿ ಶಾಲೆಗಳು, ಉದ್ದಿಮೆಗಳು ಹಾಗೂ ವಸತಿ ಸಮುದಾಯಗಳು ನಿರ್ಮಾಣಗೊಂಡಿದ್ದು. ಬಹುಪಾಲು ಆಸ್ತಿಗಳು ಗ್ರಾಮ ಪಂಚಾಯಿತಿ ತೆರಿಗೆ ವ್ಯಾಪ್ತಿಗೆ ಒಳಪಡದೆ ಇರುವುದರಿಂದ ಗ್ರಾಮ ಪಂಚಾಯಿತಿಗಳ ಸಂಪನ್ಮೂಲ ಕ್ರೋಡೀಕರಣ ದಲ್ಲಿ ಹಿನ್ನಡೆ ಉಂಟಾಗಿದೆ. ಹೀಗಾಗಿ ಗ್ರಾಮ ಪಂಚಾಯಿತಿಗಳನ್ನು ಸಧೃಡಗೊಳಿಸುವಲ್ಲಿ ಇ-ಸ್ವತ್ತು ದಾಖಲೆ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವುದು ಅನಿವಾರ್ಯ ಇದೆ. ಈ ಹಿನ್ನೆಲೆಯಲ್ಲಿ ಕಾರ್ಯಪಡೆ ರಚಿಸಲಾಗುವುದು ಎಂದು ಹೇಳಿದ್ದಾರೆ.